ಲೆಕ್ಕ ನೀಡಿ ಸಿಕ್ಕಿಬಿದ್ದರು!

ಲೆಕ್ಕ ನೀಡಿ ಸಿಕ್ಕಿಬಿದ್ದರು!

ಬೆಂಗಳೂರು: ಕೊರೋನಾ ಸೋಂಕು ವ್ಯಾಪಕವಾಗುತ್ತಿದ್ದು, ಈ ಸಂದರ್ಭದಲ್ಲಿ ಯಾರನ್ನು ನಂಬಬೇಕು? ಯಾರನ್ನು ನಂಬಬಾರದು ಎಂಬುದು ಜನರಿಗೆ ತಿಳಿಯದಂತಾಗಿದೆ. ಕೊರೋನಾ ವೈದ್ಯಕೀಯ ಸಲಕರಣೆ ಖರೀದಿಯಲ್ಲಿ ಗೋಲ್ ಮಾಲ್ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪ ಮಾಡುತ್ತಿರುವ ನಡುವಲ್ಲೇ, ಆರೋಗ್ಯ ಇಲಾಖೆ ಪ್ರತೀ ನಿತ್ಯ ನೀಡುತ್ತಿರುವ ಕೊರೋನಾ ಹೆಲ್ತ್ ಬುಲೆಟಿನ್‍ಗಳನ್ನೂ ಅನುಮಾನದಿಂದಲೇ ನೋಡುವಂತಾಗಿದೆ.
ಬಿಬಿಎಂಪಿ ಹಾಗೂ ಆರೋಗ್ಯ ಇಲಾಖೆ ಮಾಡಿದ ಯಡವಟ್ಟಿನ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್ ಅವರು ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ತನಿಖೆಗೆ ಆಗ್ರಹಿಸಿದ್ದಾರೆ.

ಸುಳ್ಳಿನ ಲೆಕ್ಕ ಜನರಾತಂಕ
ಮದನ್ ಗೋಪಾಲ್ ಅವರು ಪತ್ರ ಬರೆದಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೆ, ಯಾವಾಗಲೋ ಸತ್ತವರನ್ನೂ ಕೊರೋನಾ ಸಾವಿಗೆ ಪಟ್ಟಿಗೆ ಸೇರುವ ಪ್ರಯತ್ನಗಳಾಗುತ್ತಿವೆಯೇ? ಕೊರೋನಾ ವಿಚಾರದಲ್ಲಿ ಸರ್ಕಾರ ಸುಳ್ಳು ಲೆಕ್ಕ ನೀಡಿ ಜನರು ಆತಂಕಕ್ಕೊಳಗಾಗುವಂತೆ ಮಾಡುತ್ತಿದೆಯೇ? ಎಂಬ ಪ್ರಶ್ನೆಗಳು ಇದೀಗ ಮೂಡಲು ಆರಂಭವಾಗಿದೆ.

ಕಳೆದ 10 ದಿನಗಳಿಂದ ಆರೋಗ್ಯ ಇಲಾಖೆಯು ಸರಿಯಾದ ಮಾಹಿತಿ ನೀಡುತ್ತಿಲ್ಲ. ಬದಲಿಗೆ ಹಿಂದಿನ ವಾರ ಅಥವಾ ಹಿಂದಿನ ತಿಂಗಳುಗಳಲ್ಲಿ ಸಂಭವಿಸಿದ ಸಾವಿನ ಸಂಖ್ಯೆಯನ್ನು ನೀಡುತ್ತಿದೆ ಎಂಬ ಬಗ್ಗೆ ಮುಖ್ಯಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ ಆದರೂ ಸಚಿವ ಸಂಪುಟದ ಅನುಮೊದನೆಯೇ ಅಂತಿಮ ಇಲ್ಲಿ ಯಾರಿಗೂ ಕಿಮ್ಮತ್ತಿಲ್ಲ ಎಂದು ಮದನಗೋಪಾಲ್ ವಾಸ್ತವತೆ ಬಿಚ್ಚಿಟ್ಟಿದ್ದಾರೆ.

ಆತ್ಮ ವಿಶ್ವಾಸ ತುಂಬಿ, ಆತಂಕ ಸೃಷ್ಟಿಸಬೇಡಿ
ಸರ್ಕಾರ ಇಂತಹ ಮಾಹಿತಿಗಳನ್ನು ನೀಡುವುದರಿಂದ ಜನರಲ್ಲಿ ಆತಂಕ ಹೆಚ್ಚಾಗುತ್ತದೆ. ಪ್ರತೀ ನಿತ್ಯ ಆರೋಗ್ಯ ಇಲಾಖೆ ನೀಡುತ್ತಿರುವ ಸಾವಿನ ಸಂಖ್ಯೆ ಹೆಚ್ಚಾಗಿಯೇ ಇರುತ್ತದೆ. ಪ್ರಕರಣಗಳನ್ನು ಗಮನಿಸಿದರೆ, ಪ್ರತೀ ನಿತ್ಯ 2-3 ಸಾವುಗಳು ಸಂಭಿಸುತ್ತಿವೆ ಎಂದೆನಿಸುತ್ತಿದೆ. ಆದರೆ, ಹೆಲ್ತ್ ಬುಲೆಟಿನ್‍ನಲ್ಲಿ 60ಕ್ಕಿಂತಲೂ ಹೆಚ್ಚು ಸಾವಾಗಿದೆ ಎಂದು ತಿಳಿಸಲಾಗುತ್ತಿದೆ. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ನೈಜ ಮಾಹಿತಿಗಳನ್ನು ಸಾರ್ವಜನಿಕರಿಗೆ ನೀಡುವುದು ಮುಖ್ಯವಾಗುತ್ತದೆ. ನೈಜ ಮಾಹಿತಿಗಳು ಜನರಿಗೆ ತಲುಪದೇ ಹೋದಲ್ಲಿ ಸುಖಾಸುಮ್ಮನೆ ಆತಂಕ ಸೃಷ್ಟಿಯಾಗುತ್ತದೆ. ಜನರಲ್ಲಿ ವಿಶ್ವಾಸ, ಭರವಸೆಯನ್ನು ಹೆಚ್ಚಿಸಬೇಕೇ ವಿನಃ ಆತಂಕವನ್ನು ಸೃಷ್ಟಿಸುವ ಪ್ರಯತ್ನಗಳಾಗಬಾರದು ಎಂದಿದ್ದಾರೆ.

ಅಧಿಕಾರಿಗಳ ಬಳಿಯೇ ಸೂಕ್ತ ಮಾಹಿತಿಗಳು ಬರುತ್ತಿಲ್ಲ. ಸಹಕಾರದ ಕೊರತೆಗಳು ಇಲ್ಲಿ ಎದ್ದು ತೋರುತ್ತಿದೆ. ಹಲವರು ವರದಿಗಳು ಬರುವುದು ಬಾಕಿಯಿದ್ದು, ಆ ವರದಿಗಳೆಲ್ಲವೂ ಬಂದ ಬಳಿಕ ನೈಜ ವರದಿ ನೀಡುವುದಾಗಿ ಮುಖ್ಯ ಕಾರ್ಯದರ್ಶಿಗಳು ಭರವಸೆ ನೀಡಿದ್ದಾರೆ. ಜನರಲ್ಲಿ ಆತಂಕದ ಬದಲು ಭರವಸೆ, ವಿಶ್ವಾಸ ಮೂಡಿಸಬೇಕೆಂಬುದು ನನ್ನ ಉದ್ದೇಶವಾಗಿದೆಯೇ ಹೊರತು ಸರ್ಕಾರದ ತಪ್ಪು, ದೋಷಗಳನ್ನು ಬಹಿರಂಗಪಡಿಸುವುದಲ್ಲ ಎಂದು ತಿಳಿಸಿದ್ದಾರೆ.

ಉಳಿವಿಗಾಗಿ ಭ್ರಷ್ಟಾಚಾರ
ಅಧಿಕಾರಿಗಳು ಮತ್ತು ಸಚಿವರುಗಳ ನಡುವಿನ ಗೊಂದಲ ಹಾಗೂ ಸಮನ್ವಯತೆ ಇಲ್ಲದೆ ಇರುವುದು, ಎದ್ದು ಕಾಣುತ್ತಿದೆ ಹಾಗೂ ಅಧಿಕಾರಿಗಳು ಸಚಿವರ ಮಾತಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದಿರುವುದು, ಸೇರಿದಂತೆ ಪ್ರತಿಯೊಂದಕ್ಕೂ ಇಲಾಖಾಧಿಕಾರಿಗಳಿಗೆ ಮತ್ತು ಉನ್ನತಾಧಿಕಾರಿಗಳಿಗೆ ಆಯಾ ಇಲಾಖೆಯ ಸಚಿವರು ಮಾಸಿಕ ಹಾಗೂ ಯಾವುದೇ ನೂತನ ಕ್ರಿಯಾ ಯೊಜನೆ ಜಾರಿಗೊಂಡು ಹಣ ಬಿಡುಗಡೆಯಾದರೆ ಇಂತಿಷ್ಟೇ ನಮ್ಮ ಪಾಲು ಬರ ಬೇಕೆಂದು ಕಟ್ಟಾಜ್ಞೆ ಹೊರಡಿಸಿರುವುದೇ ಕೋವಿಡ್ ಭ್ರಷ್ಟಾಚಾರಕ್ಕೆ ಕಾರಣವೆನ್ನಲಾಗಿದ್ದು ಅಧಿಕಾರಿಗಳು ತಮ್ಮ ಉಳುವಿಗಾಗಿ ಭ್ರಷ್ಟಾಚಾರಕ್ಕೆ ಇಳಿದಿದ್ದಾರೆನ್ನುವುದೇ ನೈಜ ವರದಿ ಎನ್ನಲಾಗಿದೆ.

Related