ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ದೂರು

ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ದೂರು

ಬೆಂಗಳೂರು: ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರದ ಹಣ ಬಿಡುಗಡೆ ಮಾಡಿಲ್ಲ ಎಂದು ಇಂದು ಮಂಗಳವಾರ ಏಪ್ರಿಲ್ 23ರಂದು ವಿಧಾನಸೌಧದಲ್ಲಿರುವ ಗಾಂಧಿ ಪ್ರತಿಮೆಯ ಎದುರುಗಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆಯನ್ನು ಕೈಗೊಂಡಿದ್ದರು.

ಚುನಾವಣೆ ಸಂದರ್ಭದಲ್ಲಿ ಸಭೆ, ಸಮಾರಂಭ, ಪ್ರತಿಭಟನೆ ಮಾಡಬಾರದೆಂದು ಚುನಾವಣೆ ಆಯೋಗ ಈಗಾಗಲೇ ತಿಳಿಸಿದರು ಕೂಡ ಇಂದು ರಾಜ್ಯ ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಿರುವುದರಿಂದ ಬಿಜೆಪಿ ಪಕ್ಷ ಕಾಂಗ್ರೆಸ್ ನಾಯಕರ ವಿರುದ್ಧ ದೂರು ದಾಖಲಿಸಿದೆ.

ಸಿಎಂ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ವಿರುದ್ಧ ರಾಜ್ಯ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದೆ. ಚುನಾವಣಾ ಪ್ರಚಾರಕ್ಕೆ ನಿರ್ಬಂಧ ವಿಧಿಸುವಂತೆ ಆಯೋಗಕ್ಕೆ ಮನವಿ‌ ಸಲ್ಲಿಸಲಾಗಿದೆ. ಪ್ರತಿಭಟನೆಗೆ ಅವಕಾಶ ಮಾಡಿಕೊಟ್ಟ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ವಿರುದ್ಧವೂ ಬಿಜೆಪಿ ದೂರು ನೀಡಿದ್ದು, ಅವರನ್ನು ಅಮಾನತು ಮಾಡಿ ತನಿಖೆಗೆ ಆದೇಶಿಸುವಂತೆ ಒತ್ತಾಯಿಸಿದೆ.

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಈ ಸಂದರ್ಭದಲ್ಲಿ ಸದರಿ ಬರ ಪರಿಹಾರದ ವಿಚಾರವು ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿಯಿರುತ್ತದೆ. ಹಾಗಿದ್ದರೂ ಕೇಂದ್ರ ಸರ್ಕಾರದ ವಿರುದ್ಧ ಅನಧಿಕೃತವಾಗಿ ಪ್ರತಿಭಟಿಸಿ ಮತದಾರರ ಮನಸ್ಸಿನಲ್ಲಿ ಪಕ್ಷದ ವಿರುದ್ಧ ವಿರೋಧಿ ಭಾವನೆ ಉಂಟುಮಾಡಿ ಚುನಾವಣೆಯಲ್ಲಿ ಆಕ್ರಮ ಲಾಭ ಪಡೆಯುವ ಉದ್ದೇಶವನ್ನು ಕಾಂಗ್ರೆಸ್ ನಾಯಕರು ಹೊಂದಿದ್ದಾರೆ ಎಂದು ದೂರಿನಲ್ಲಿ ಬಿಜೆಪಿ ಉಲ್ಲೇಖಿಸಿದೆ.

 

Related