ಕುಲಪತಿ ಇಲ್ಲದೆ ಭಣಭಣ

ಕುಲಪತಿ ಇಲ್ಲದೆ ಭಣಭಣ

ಕಲಬುರಗಿ,ಫೆ. 12 : ಕುಲಪತಿ ಇಲ್ಲ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ಇಲ್ಲ, ಅನುದಾನ ಬರುತ್ತಿಲ್ಲ, ಕುಲಪತಿ ಹುದ್ದೆ ನೇಮಕ ಪ್ರಕ್ರಿಯೆ ಇನ್ನೂ ವಿಳಂಬವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಶೋಧನಾ ಸಮಿತಿ ರಚನೆಯಾಗಿ ಪ್ರಕ್ರಿಯೆ ಪೂರ್ಣಗೊಂಡರೂ ಕುಲಪತಿ ನೇಮಕ ಪ್ರಕ್ರಿಯೆಗೆ ಸರ್ಕಾರ ಮುಂದಾಗುತ್ತಿಲ್ಲ. ಹಿಂದಿನ ಸರ್ಕಾರ ಶೋಧನಾ ಸಮಿತಿ ರಚಿಸಿದ್ದು, ಈಗಿನ ಸರ್ಕಾರ ಸಮಿತಿ ಅಧ್ಯಕ್ಷರನ್ನು ಬದಲಾವಣೆ ಮಾಡಲು ವಿಳಂಬ ಮಾಡುತ್ತಿದೆ. ಸಮಿತಿ ರಚನೆಯಾಗಿ ಸಭೆ ನಡೆದು ಸರ್ಕಾರಕ್ಕೆ ಹೆಸರುಗಳ ಶಿಫಾರಸು ಮಾಡುವ ಕೆಲಸ ಈಗಾಗಲೇ ಮುಗಿಯಬೇಕಿತ್ತು. ಆದರೆ ವಿಳಂಬ ನೀತಿ ವಿದ್ಯಾರ್ಥಿಗಳನ್ನು ಫಜೀತಿಗೆ ತಳ್ಳಿದೆಯಲ್ಲದೆ ಶಿಕ್ಷಣದ ಗುಣಮಟ್ಟ ಕುಸಿಯಲು ಕಾರಣವಾಗಿದೆ.

ಅತಿಥಿ ಉಪನ್ಯಾಕರು, ಹೊರಗುತ್ತಿಗೆ ನೌಕರರೇ ಆಧಾರ. ಇದು ಉನ್ನತ ಶಿಕ್ಷಣ ಕೇಂದ್ರವೂ ಆದ ಗುಲ್ಬರ್ಗ ವಿಶ್ವವಿದ್ಯಾಲಯದ ಶೋಚನೀಯ ಸ್ಥಿತಿ. ಕಲ್ಯಾಣ ಕರ್ನಾಟಕದ ಗುಲ್ಬರ್ಗ ವಿಶ್ವವಿದ್ಯಾಲಯವನ್ನು ಸರ್ಕಾರ ಸಂಪೂರ್ಣ ಕಡೆಗಣಿಸಿರುವುದೇ ಈ ಸ್ಥಿತಿಗೆ ಕಾರಣ. ಕುಲಪತಿ ಅವಧಿ ಮುಗಿದು 8-10 ತಿಂಗಳಾಗಿದೆ. ಈಗೇನಿದ್ದರೂ ಹಿರಿಯ ಡೀನ್ಗಳ ಸಾರಥ್ಯದಲ್ಲಿ ಆಡಳಿತ ಚಟುವಟಿಕೆ ನಡೆದಿವೆ.
ಸಿಬ್ಬಂದಿ ಕೊರತೆ: ಉನ್ನತ ಶಿಕ್ಷಣ ವಿದ್ಯಾಕೇಂದ್ರಕ್ಕೆ ನಾಯಕನೇ ಇಲ್ಲವೆಂದಾದರೆ ವಾರ್ಷಿಕ ಶೈಕ್ಷಣಿಕ ಚಟುವಟಿಕೆಯಲ್ಲಿ ಏರುಪೇರಾಗಲಿದೆ. ಬೋಧನೆ, ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ ಹೀಗೆ ಎಲ್ಲ ಹಂತದಲ್ಲೂ ತೊಂದರೆ ಎದುರಾಗುತ್ತಿದೆ. ಶೈಕ್ಷಣಿಕ ಗುಣಮಟ್ಟದ ಮೇಲೂ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ. ಪೂರ್ಣಪ್ರಮಾಣದ ಕುಲಪತಿ ಇಲ್ಲದಿದ್ದಲ್ಲಿ ಸಿಬ್ಬಂದಿ ಕಾರ್ಯಕ್ಷಮತೆಯಲ್ಲೂ ಏರಿಳಿತ ಕಂಡುಬರಲಿದೆ. ವಿವಿಯಲ್ಲಿ 175 ಭೋದಕ ಮತ್ತು 300 ಭೋದಕೇತರ ಹುದ್ದೆ ಖಾಲಿ ಇದ್ದು, ಬಹುತೇಕ ವಿಭಾಗಗಳು ಅತಿಥಿ ಶಿಕ್ಷಕರನ್ನೇ ಅವಲಂಬಿಸಿವೆ.
ಸಿಗದ ನ್ಯಾಕ್ ಮಾನ್ಯತೆ: ನ್ಯಾಕ್ ಎ ಗ್ರೇಡ್ ಮಾನ್ಯತೆಗೆ ವಿಶ್ವವಿದ್ಯಾಲಯ ಎಲ್ಲ ಹಂತದ ಪ್ರಯತ್ನ ಮಾಡಿದರೂ ದೊರೆತಿಲ್ಲ. ಮುಂದಿನ ಎರಡು ವರ್ಷದಲ್ಲಿ ಮತ್ತೆ ನ್ಯಾಕ್ಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಮಾನ್ಯತೆಗಾಗಿ ಶೈಕ್ಷಣಿಕ ಚಟುವಟಿಕೆ, ಗುಣಮಟ್ಟದ ಸಂಶೋಧನೆ ಹೀಗೆ ಎಲ್ಲ ಹಂತದಲ್ಲೂ ದಾಖಲೆ ಸಂಗ್ರಹಿಸಿರಬೇಕು. ಆದರೆ ಪ್ರಸಕ್ತ ಇದ್ಯಾವುದೂ ನಡೆಯುತ್ತಿಲ್ಲ. ಗುಣಮಟ್ಟದ ಪ್ರಕಟಣೆ, ಪೂರ್ಣಾವಧಿ ಕುಲಪತಿ ಇಲ್ಲದಿದ್ದರೆ ಇದ್ಯಾವುದೂ ಸಾಧ್ಯವಾಗದು. ಖಾಲಿ ಹುದ್ದೆಗಳ ಭರ್ತಿಗೆ ಯುಜಿಸಿ ಡೆಡ್ಲೈನ್ ನೀಡಿದೆ. ಪೂರ್ಣಪ್ರಮಾಣದ ಕುಲಪತಿ ಇಲ್ಲದಿರುವಾಗ ನೇಮಕಾತಿ ನಡೆಯುವುದಾದರೂ ಹೇಗೆ ಎಂಬ ಪ್ರಶ್ನೆ ಕಾಡುತ್ತಿದೆ. ವಿಚಾರ ಸಂಕಿರಣ, ಕಾರ್ಯಾಗಾರ, ಕ್ರೀಡಾಕೂಟ ಹೀಗೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಈವೆಂಟ್ಸ್ಗಳು ನ್ಯಾಕ್ಗೆ ಪೂರಕವಾಗಲಿವೆ. ಆದರೆ ಇದ್ಯಾವುದೂ ಸಾಧ್ಯವಾಗುತ್ತಿಲ್ಲ.

Related