ಭೀಮಣ್ಣ ಖಂಡ್ರೆ ಅವರ ಹೋರಾಟ-ನಾಯಕತ್ವ ಶಾಶ್ವತವಾಗಿ ಉಳಿಯಲಿದೆ: ಸಿಎಂ

ಭೀಮಣ್ಣ ಖಂಡ್ರೆ ಅವರ ಹೋರಾಟ-ನಾಯಕತ್ವ ಶಾಶ್ವತವಾಗಿ ಉಳಿಯಲಿದೆ: ಸಿಎಂ

ಬೀದರ್: ಭೀಮಣ್ಣ ಖಂಡ್ರೆ ಹುಟ್ಟು ಹೋರಾಟಗಾರರು. ಬೀದರ್ ಕರ್ನಾಟಕದಲ್ಲೇ ಉಳಿಯಲು ಭೀಮಣ್ಣ ಖಂಡ್ರೆ ಅವರ ಹೋರಾಟವೂ ಕಾರಣ ಎಂದು ಸಿ.ಎಂ.ಸಿದ್ದರಾಮಯ್ಯ ನುಡಿದರು.

ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾ ಮತ್ತು ಡಾ.ಭೀಮಣ್ಣ ಖಂಡ್ರೆ ಜನ್ಮ ಶತಮಾನೋತ್ಸವ ಸಮಿತಿ ಜಂಟಿಯಾಗಿ ಹಮ್ಮಿಕೊಂಡಿದ್ದ ಡಾ.ಭೀಮಣ್ಣ ಖಂಡ್ರೆ ಜನ್ಮ ಶತಮಾನೋತ್ಸವವನ್ನು ಉದ್ಘಾಟಿಸಿ “ಲೋಕನಾಯಕ” ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿದರು.

ಮಹಾತ್ಮಗಾಂಧಿಯವರ ಕರೆ ಓಗೊಟ್ಟು ಸ್ವಾತಂತ್ರ್ಯ ಹೋರಾಟದಲ್ಲಿ ದುಮುಕಿದರು. ಬಳಿಕ ಕರ್ನಾಟಕ ಏಕೀಕರಣ ಚಳವಳಿಯಲ್ಲೂ ಸಕ್ರಿಯರಾಗಿ ಬೀದರ್ ಜಿಲ್ಲೆಯನ್ನು ಕರ್ನಾಟಕದಲ್ಲೇ ಉಳಿಸಿಕೊಳ್ಳಲು ರಾಜಿರಹಿತವಾಗಿ ಹೋರಾಟ ನಡೆಸಿದರು. ಇವರ ಹೋರಾಟದ ಹೆಜ್ಜೆಗಳು ಈ ಮಣ್ಣಿನಲ್ಲಿ ದಾಖಲಾಗಿ ಭೀಮಣ್ಣ ಖಂಡ್ರೆಯವರು ಸಮಾಜದ ಋಣ ತೀರಿಸಿ ಸಾರ್ಥಕ ಬದುಕನ್ನು ಸಾಗಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಸವಣ್ಣನವರ ಅಪ್ಪಟ ಅನುಯಾಯಿಯಾಗಿರುವ ಭೀಮಣ್ಣ ಖಂಡ್ರೆಯವರು ವಚನ ಸಾಹಿತ್ಯವನ್ನು ಇಡಿ ರಾಜ್ಯಕ್ಕೆ ಪಸರಿಸಲು ಶ್ರಮಿಸಿದ್ದಾರೆ. ಜಾತಿ ತಾರತಮ್ಯ ಇಲ್ಲದ ಸಮಾಜದ ಆಶಯ ವಚನ ಸಾಹಿತ್ಯದ್ದಾಗಿದೆ. 850 ವರ್ಷಗಳ ಹಿಂದೆ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಮೇಲು ಕೀಳಿನ ಸಮಾಜವನ್ನು ಅಳಿಸಿ ಸಮಾನಾಂತರ ಸಮಾಜಕ್ಕೆ ಅಡಿಪಾಯ ಹಾಕಿದರು. ಈ ಪಂಪರೆಯಲ್ಲಿ ಭೀಮಣ್ಣ ಖಂಡ್ರೆ ಅವರು ಸಾಗಿ ಬಂದಿದ್ದಾರೆ ಎಂದರು.

ಸುತ್ತೂರು ಶ್ರೀ ಕ್ಷೇತ್ರದ ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಮಹಾಸ್ವಾಮಿಗಳು, ಆಂಧ್ರ ಶ್ರೀಶೈಲ ಪೀಠದ ಡಾ.ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಸೇರಿದಂತೆ ನೂರಕ್ಕೂ ಅಧಿಕ ಮಹಾಸ್ವಾಮಿಗಳು ಮತ್ತು ಕಾನೂನು ಸಚಿವ ಹೆಚ್.ಕೆ.ಪಾಟೀಲ್, ಇಂಧನ ಸಚಿವ ಕೆ.ಜೆ.ಜಾರ್ಜ್, ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸೇರಿದಂತೆ ನೂರಕ್ಕೂ ಹೆಚ್ಚು ಹಾಲಿ, ಮಾಜಿ ಸಚಿವರು, ಶಾಸಕರು, ನಾಯಕರುಗಳು ಉಪಸ್ಥಿತರಿದ್ದರು.‌

Related