Sbi Employee error: ಕಾಪಿ ಪೇಸ್ಟ್ ಎಡವಟ್ಟು, 1.50 ಕೋಟಿ ಹಣ ತಪ್ಪು ಖಾತೆಗೆ ಜಮೆ..!!

ತಪ್ಪು ಖಾತೆಗೆ ಹಣ ವರ್ಗಾವಣೆ ಮಾಡಿದ ತಪ್ಪಿನ ಅರಿವಾದ ಕೂಡಲೇ ಎಸ್​ಬಿಐ ಅಧಿಕಾರಿಗಳು ಉದ್ಯೋಗಿಗಳಿಗೆ ಕರೆ ಮಾಡಿ ಮೊತ್ತವನ್ನು ಹಿಂದಕ್ಕೆ ವರ್ಗಾಯಿಸುವಂತೆ ಕೇಳಿಕೊಂಡಿದ್ದಾರೆ. 14  ಬ್ಯಾಂಕ್ ಉದ್ಯೋಗಿಗಳು ಹಣವನ್ನು ಹಿಂತಿರುಗಿಸಿದ್ದಾರೆ.

ಇದು ಒಂದೆರಡು ರೂಪಾಯಿಯ ಕಥೆಯಲ್ಲ, ಬ್ಯಾಂಕ್​ನವರ ಚಿಕ್ಕ ತಪ್ಪಿನಿಂದ ಬರೋಬ್ಬರಿ 1.5 ಕೋಟಿ ರೂಪಾಯಿ ಹಣವೇ ಮಂಗಮಾಯವಾದ ಸುದ್ದಿಯಿದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಯೋರ್ವರು (SBI Employee) ಕೆಲಸದಲ್ಲಿ ಮಾಡಿದ ತಪ್ಪೊಂದು 1.50 ಕೋಟಿ ರೂ.ಗಳನ್ನು ತಪ್ಪು ಫಲಾನುಭವಿಗಳಿಗೆ ವರ್ಗಾಯಿಸಲು (Money Transferred to Wrong Accounts) ಕಾರಣವಾಗಿದೆ.

ಎಸ್ಬಿಐ ಉದ್ಯೋಗಿಯ ಕಾಪಿ ಪೇಸ್ಟ್ (Copy-Paste Error) ತಪ್ಪಿನಿಂದಾಗಿ ದಲಿತ ಬಂಧು ಯೋಜನೆಯ ಫಲಾನುಭವಿಯ ಖಾತೆಗೆ ವರ್ಗಾವಣೆ ಆಗಬೇಕಿದ್ದ ಹಣ ಆಕಸ್ಮಿಕವಾಗಿ ಲೋಟಸ್ ಎಂಬ ಆಸ್ಪತ್ರೆಯ 15 ಉದ್ಯೋಗಿಗಳ ಖಾತೆಗಳಿಗೆ ಜಮಾ ಆಗಿದೆ. ತಮ್ಮ ಖಾತೆಗೆ 10 ಲಕ್ಷ ರೂ.ಗಳನ್ನು ಪಡೆದ 15 ಜನರಲ್ಲಿ 14 ಮಂದಿ ಹಣವನ್ನು ಹಿಂದಿರುಗಿಸಿದ್ದಾರೆ. ಸರ್ಕಾರದ ಯಾವುದೋ ಯೋಜನೆಯಡಿ ತನ್ನ ಖಾತೆಗೆ 10 ಲಕ್ಷ ರೂಪಾಯಿ ಜಮೆಯಾಗಿದೆ ಎಂದು ಲ್ಯಾಬ್ ತಂತ್ರಜ್ಞ ಮಹೇಶ್ ತಪ್ಪಾಗಿ ಭಾವಿಸಿ ತಾವು ಹಿಂದೆ ಮಾಡಿದ್ದ ಸಾಲವನ್ನು ತೀರಿಸಲು ಸ್ವಲ್ಪ ಹಣವನ್ನು ಬಳಸಿದ್ದಾರೆ. ಮತ್ತೊಮ್ಮೆ ಹಣವನ್ನು ಹಿಂತಿರುಗಿಸುವಂತೆ ವಿನಂತಿ ಮಾಡಿದರೂ ಅವರು ಹಣವನ್ನು ಹಿಂದಿರುಗಿಸಲಿಲ್ಲ. ಮಹೇಶ್ ಅವರು 6.70 ಲಕ್ಷ ರೂ.ಗಳನ್ನು ಹಿಂದಿರುಗಿಸಿದರೂ ಈಗಾಗಲೇ ಅವರು ಖರ್ಚು ಮಾಡಿದ 3.30 ಲಕ್ಷ ರೂ. ಹಣ ಬ್ಯಾಂಕ್ಗೆ ಇನ್ನೂ ಕಡಿಮೆ ಬೀಳಲಿದೆ. ಈತನ ವಿರುದ್ಧ ಐಪಿಸಿ ಸೆಕ್ಷನ್ 403 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Related