ಅಮೃತ್ ಪೌಲ್ ಅನ್ನು ಕೂಡಲೇ ಬಂಧಿಸಿ – ಸಿದ್ದು ಆಗ್ರಹ

ಅಮೃತ್ ಪೌಲ್ ಅನ್ನು ಕೂಡಲೇ ಬಂಧಿಸಿ – ಸಿದ್ದು ಆಗ್ರಹ

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಇಂದು ಕೆಪಿಸಿಸಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಪಿಎಸ್ಐ ನೇಮಕಾತಿ ಹಗರಣದಲ್ಲಿ ನೇಮಕಾತಿ ಉಸ್ತುವಾರಿ ವಹಿಸಿಕೊಂಡಿದ್ದ ಎಡಿಜಿಪಿ ಅಮೃತ್ ಪೌಲ್ ಅವರನ್ನು ಬಂಧಿಸಿ, ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಹಗರಣದ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿದಾಗ ಮುಖ್ಯಮಂತ್ರಿಗಳು, ಗೃಹ ಸಚಿವರು ಸೇರಿದಂತೆ ಎಲ್ಲರೂ ನಮ್ಮ ಮೈಮೇಲೆ ಬಂದರು. ಒಬ್ಬ ಜವಾಬ್ದಾರಿ ಸ್ಥಾನದಲ್ಲಿರುವ ಮಂತ್ರಿ ತಮ್ಮ ಇಲಾಖೆ ಮೇಲೆ ಬಂದ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ರು, ಈಗ ಎಡಿಜಿಪಿ ಒಬ್ಬರನ್ನು ಬಂಧಿಸಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳಲು ಹೊರಟಿದ್ದಾರೆ.

ಕರ್ನಾಟಕದ ಆರೂವರೆ ಕೋಟಿ ಜನರಿಗೆ ವಿಧಾನಸಭೆ ಮೂಲಕ ಸುಳ್ಳು ಹೇಳಿದವರು ಮಂತ್ರಿಯಾಗಿ ಮುಂದುವರೆಯಲು ಲಾಯಕ್ಕಾ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ನಾನು ಅನೇಕ ಬಾರಿ ಇವರನ್ನು ಮಂತ್ರಿ ಸ್ಥಾನದಿಂದ ವಜಾ ಮಾಡುವಂತೆ ಹೇಳಿದ್ದೆ. ಇವರು ಇಂಥಾ ಅನೇಕ ಘಟನೆಗಳಲ್ಲಿ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಉದಾಹರಣೆಗೆ ಶಿವಮೊಗ್ಗದಲ್ಲಿ ನಡೆದ ಗಲಭೆ, ಮೈಸೂರಿನಲ್ಲಿ ನಡೆದ ಯುವತಿ ಮೇಲಿನ ಅತ್ಯಾಚಾರ ಪ್ರಕರಣ, ಹೀಗೆ ಹಲವು ಇವೆ. ಮುಖ್ಯಮಂತ್ರಿಗಳು ಇಂಥಾ ಒಬ್ಬ ಸಚಿವರನ್ನು ಮಂತ್ರಿ ಮಂಡಲದಲ್ಲಿ ಇಟ್ಟುಕೊಂಡು ಅವರ ಮೂಲಕ ಬೇಜವಾಬ್ದಾರಿ, ಅಸಂಬದ್ಧ ಹಾಗೂ ಸುಳ್ಳು ಹೇಳಿಕೆಯನ್ನು ಕೊಡಿಸುತ್ತಿದ್ದಾರೆ. ಸರ್ಕಾರದ ಒಟ್ಟು ಉದ್ದೇಶ ಇಡೀ ಪ್ರಕರಣವನ್ನು ಮುಚ್ಚಿಹಾಕುವುದಾಗಿತ್ತು.

ನಾವು, ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳು ಸಾಕಷ್ಟು ಬಾರಿ ತನಿಖೆಗೆ ಒತ್ತಾಯ ಮಾಡಿದ್ದೇವೆ. ನಾವು ಮಾರ್ಚ್ ತಿಂಗಳಲ್ಲಿ ತನಿಖೆಗೆ ಒತ್ತಾಯ ಮಾಡಿದ್ದರೆ, ಸರ್ಕಾರ ಏಪ್ರಿಲ್ ನಲ್ಲಿ ಸಿಐಡಿ ತನಿಖೆ ಆರಂಭ ಮಾಡಿಸಿತು. ಸಿಐಡಿ ಇಂದ ನ್ಯಾಯ ಸಿಗಲ್ಲ, ಇದರಲ್ಲಿ ಮಂತ್ರಿಗಳು, ದೊಡ್ಡ ದೊಡ್ಡ ರಾಜಕಾರಣಿಗಳ ಪಾತ್ರ ಇರುವುದರಿಂದ ಸಿಐಡಿ ಅವರನ್ನೆಲ್ಲ ವಿಚಾರಣೆ ಮಾಡಿ ಬಂಧಿಸುವುದು ಕಷ್ಟದ ಕೆಲಸ ಹಾಗಾಗಿ ಈ ಹಗರಣವನ್ನು ನ್ಯಾಯಾಂಗ ತನಿಖೆ ಮಾಡಿಸಬೇಕು ಎಂದು ಹಲವು ಬಾರಿ ಒತ್ತಾಯ ಮಾಡಿದ್ದೆ. ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ತನಿಖೆ ನಡೆಯಬೇಕು ಎಂದು 2022 ಮೇ 26 ರಂದು ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದೆ.

ಮಂಜುನಾಥ್ ಅವರ ಪ್ರಕರಣದಲ್ಲಿ ಡಿಸಿ ಜೈಲಿಗೆ ಹೋಗಿದ್ದಾರಲ್ಲ, ಆ ಪ್ರಕರಣದಲ್ಲಿ ನ್ಯಾಯಾಧೀಶರನ್ನೇ ಹೆದರಿಸುವ ಪ್ರಯತ್ನ ನಡೆದಿದೆ. ಇಲ್ಲಿ ನ್ಯಾಯಾಧೀಶರಿಗೆ ರಕ್ಷಣೆ ಇಲ್ಲವಾಗಿದೆ. ಸರ್ಕಾರ ಭ್ರಷ್ಟರಿಂದ ಹಣ ಪಡೆದು ಅವರ ರಕ್ಷಣೆಗೆ ನಿಂತಿರುವುದೇ ಈ ಸ್ಥಿತಿಗೆ ಕಾರಣ. ಒಂದು ವೇಳೆ ನ್ಯಾಯಾಧೀಶರು ಹೆದರಿದ್ರೆ ಪ್ರಕರಣದಲ್ಲಿ ನ್ಯಾಯ ಸಿಗುತ್ತಿರಲಿಲ್ಲ. ಎಸಿಬಿ (ಆ್ಯಂಟಿ ಕರಪ್ಷನ್ ಬ್ಯೂರೋ) ಅನ್ನು ಕಲೆಕ್ಷನ್ ಬ್ಯೂರೋ ಎಂದು ಜಡ್ಜ್ ಹೇಳಿದ್ದಾರೆ. ಎಸಿಬಿ ಯನ್ನು ಹುಟ್ಟುಹಾಕಿದ್ದು ನಾವೇ, ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳಲ್ಲೂ ಎಸಿಬಿ ಇದೆ, ರಾಜಸ್ಥಾನ, ಗುಜರಾತ್ ನಲ್ಲಿ ಇಲ್ಲವಾ? ಅದರೆ ಅದನ್ನು ದುರ್ಬಳಕೆ ಮಾಡಿಕೊಂಡರೆ ಸರ್ಕಾರದ ತಪ್ಪಾಗುತ್ತದೆ. ಅದಕ್ಕೆ ಯಾರು ಆ ವ್ಯವಸ್ಥೆಯನ್ನು ಹುಟ್ಟುಹಾಕಿದ್ದಾರೆ ಅವರು ಹೊಣೆಯಾಗಲ್ಲ. ಭ್ರಷ್ಟಾಚಾರ ನಿರ್ಮೂಲನೆ ಆಗಲಿ ಎಂದೇ ಇಂಥಾ ಸಂಸ್ಥೆಗಳನ್ನು ಹುಟ್ಟುಹಾಕೋದು.

ಪಿಎಸ್ಐ ಹಗರಣದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ವಿಜಯೇಂದ್ರ ಹಾಗೂ ಸಚಿವ ಅಶ್ವಥ್ ನಾರಾಯಣ್ ಅವರು ಭಾಗಿಯಾಗಿದ್ದಾರೆ ಎಂಬ ಆರೋಪಗಳು ಕೇಳಿಬಂದಿದೆ. ಅಶ್ವಥ್ ನಾರಾಯಣ್ ಅವರ ಸಂಬಂಧಿಕರು ಮಾರ್ಕ್ಸ್ ತಿದ್ದುಪಡಿ ಮಾಡಿಕೊಂಡು ಆಯ್ಕೆಯಾಗಿದ್ದಾರೆ ಎಂಬ ಆರೋಪವಿದೆ. ಇವರಿಗೆಲ್ಲ ರಕ್ಷಣೆ ನೀಡುತ್ತಿರುವ ಮುಖ್ಯಮಂತ್ರಿಗಳೇ ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕು ಮತ್ತು ಈ ಹಗರಣವನ್ನು ಹೈಕೋರ್ಟ್ ನ ಹಾಲಿ ನ್ಯಾಯಾಧೀಶರ ಮೇಲುಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸುತ್ತೇನೆ.

Related