ಏ. 26 ಐಟಿ-ಬಿಟಿ ಸಂಸ್ಥೆಗಳಿಗೆ ರಜೆ

ಏ. 26 ಐಟಿ-ಬಿಟಿ ಸಂಸ್ಥೆಗಳಿಗೆ ರಜೆ

ಬೆಂಗಳೂರು: ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಮತದಾನ ನಡೆಯಬೇಕೆಂದು ಬಿಬಿಎಂಪಿಯು ಒಂದು ಹೆಜ್ಜೆ ಮುಂದೆ ಇಟ್ಟಿದೆ.

ಹೌದು, ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಮತದಾನ ನಡೆಯಬೇಕೆಂಬ ಉದೇಶದಿಂದ ಮತದಾನದ ದಿನದಂದು ಎಲ್ಲಾ ಐಟಿ-ಬಿಟಿ ಕಂಪನಿಗಳಿಗೆ ರಜೆ ನೀಡಬೇಕೆಂದು ಚುನಾವಣಾ ಅಧಿಕಾರಿ ಹಾಗೂ ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್ ರವರು ತಿಳಿಸಿದರು.

ಐಟಿ-ಬಿಟಿ ಇಲಾಖೆ ಸಹಯೋಗದಲ್ಲಿ ಎಂ.ಎಸ್ ಬಿಲ್ಡಿಂಗ್(5ನೇ ಗೇಟ್) 6ನೇ ಮಹಡಿಯ ಸಮ್ಮೇಳನಾ ಸಭಾಂಗಣದಲ್ಲಿ ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರ ಜೊತೆ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಎಲ್ಲಾ ಐಟಿ-ಬಿಟಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ವೇತನ ಸಹಿತ ರಜೆ ನೀಡಲು ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ. ಆ ಬಗ್ಗೆ ಎಲ್ಲರಿಗೂ ಮಾಹಿತಿ ನೀಡಲಾಗಿದ್ದು, ಅದಕ್ಕೆ ಎಲ್ಲಾ ಸಂಸ್ಥೆಗಳು ಒಪ್ಪಿಕೊಂಡಿದ್ದಾರೆ. ಅಲ್ಲದೆ ಆಯಾ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ತಪ್ಪದೆ ಮತ ಚಲಾಯಿಸಲು ಅರಿವು ಮೂಡಿಸುವ ಕೆಲಸ ಮಾಡಲು ತಿಳಿಸಲಾಗಿದೆ ಎಂದರು.

ಬೆಂಗಳೂರು ನಗರದಲ್ಲಿ ಐಟಿ-ಬಿಟಿ ಹಬ್ ಇದ್ದು, ಲಕ್ಷಾಂತರ ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ನಗರದಲ್ಲಿ ಹೆಚ್ಚು ಐಟಿ-ಬಿಟಿ ಸಂಸ್ಥೆಗಳಿರುವ ಕಡೆ ಹಾಗೂ ಕಡಿಮೆ ಮತದಾನವಾಗಿರುವ ಸಂಸ್ಥೆಗಳಲ್ಲಿ ಹೆಚ್ಚಾಗಿ ಮತದಾನದ ಕುರಿತು ಜಾಗೃತಿ ಮೂಡಿಸಲು ತಿಳಿಸಲಾಗಿದೆ ಎಂದರು.

ಐಟಿ-ಬಿಟಿ ಇಲಾಖೆಯ ಕಾರ್ಯದರ್ಶಿಯಾದ ಶ್ರೀಮತಿ ಏಕ್ ರೂಪ್ ಕೌರ್ ರವರು ಮಾತನಾಡಿ, ಲೋಕಸಭಾ ಚುನಾವಾಣೆ ಹಿನ್ನೆಲೆ ಐಟಿ-ಬಿಟಿ ಸಂಸ್ಥೆಗಳ ಮುಖ್ಯಸ್ಥರ ಜೊತೆ ಸಭೆ ನಡೆಸಿ ಮತದಾನದ ಕುರಿತು ತಿಳುವಳಿಕೆಯನ್ನು ನೀಡಲಾಗಿದೆ ಎಂದರು.

ನಗರದಲ್ಲಿ ಸುಮಾರು 4,500 ಐಟಿ-ಬಿಟಿ ಸಂಸ್ಥೆಗಳಿದ್ದು, ಎಲ್ಲಾ ಸಂಸ್ಥೆಗಳಿಗೂ ಮತದಾನದ ದಿನವಾದ ಏಪ್ರಿಲ್ 26ರಂದು ರಜೆ ನೀಡಿ ಎಲ್ಲಾ ಮತದಾರರಿಗೆ ಮತ ಚಲಾಯಿಸಲು ಅನುಕೂಲ ಮಾಡಿಕೊಡಲು ಮನವಿ ಮಾಡಲಾಗಿದೆ. ಜೊತೆಗೆ ಎಲ್ಲಾ ಸಿಬ್ಬಂದಿಗಳಿಗೆ ಮೇಲ್ ಮೂಲಕವೂ ಮತದಾನ ಮಾಡಲು ಅರಿವು ಮೂಡಿಸಲು ತಿಳಿಸಲಾಗಿದೆ ಎಂದು ಹೇಳಿದರು.

 

Related