ಅನುದಾನ ದುರ್ಬಳಕೆ: ಪಿಡಿಒ ವಿರುದ್ದ ದೂರು

  • In Stories
  • February 20, 2020
  • 453 Views
ಅನುದಾನ ದುರ್ಬಳಕೆ: ಪಿಡಿಒ ವಿರುದ್ದ ದೂರು

ಕೊರಟಗೆರೆ, ಫೆ. 20: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2019-20ನೇ ಸಾಲಿನಲ್ಲಿ ಬಿಕ್ಕೆಗುಟ್ಟೆ ಅಂಗನವಾಡಿ ಕಟ್ಟಡದ ಉನ್ನತೀಕರಣಕ್ಕೆ ಬಿಡುಗಡೆಯಾದ 2ಲಕ್ಷ ಅನುದಾನನವನ್ನು ನಿಯಮ ಉಲ್ಲಂಸಿ ಕುರಂಕೋಟೆ ಗ್ರಾಪಂ ಪ್ರಭಾರ ಪಿಡಿಒ ಆಗಿದ್ದ ಲಕ್ಷ್ಮಣ್ ದುರ್ಬಳಕೆ ಮಾಡಿರುವುದು ತಾಪಂ ಸಹಾಯಕ ಲೆಕ್ಕಾಧಿಕಾರಿ ಮತ್ತು ಇಒ ತನಿಖೆಯಿಂದ ಬಯಲಾಗಿದೆ.

2 ಲಕ್ಷ ರೂ. ಜಮೆ: ತಾಲೂಕಿನ ಚನ್ನರಾಯನದುರ್ಗ ಹೋಬಳಿ ಕುರಂಕೋಟೆ ಗ್ರಾಪಂ ವ್ಯಾಪ್ತಿಯ ಬಿಕ್ಕೆಗುಟ್ಟೆ ಅಂಗನವಾಡಿ ಕೇಂದ್ರದ ದುರಸ್ತಿ ಮತ್ತು ಮರು ನಿರ್ಮಾಣಕ್ಕೆ 2019ನೇ ಜೂ.18ರಂದು ಕುರಂಕೋಟೆ ಗ್ರಾಪಂ ವರ್ಗ-1ರ ಪಿಡಿಒ ಖಾತೆಗೆ 2 ಲಕ್ಷ ರೂ. ಜಮೆಯಾಗಿದೆ. ಆದರೆ ಹಣವನ್ನು ಯಾವುದೇ ಮಾನದಂಡವಿಲ್ಲದೇ ದುರುಪಯೋಗ ಮಾಡಿಕೊಂಡಿದ್ದಾರೆ.

ಸರ್ಕಾರದ ಆದೇಶದಂತೆ ಅಂಗನವಾಡಿ ಕೇಂದ್ರದ ದುರಸ್ತಿ, ಮರು ನಿರ್ಮಾಣ, ಶೌಚಗೃಹ, ಶೌಚಗುಂಡಿ, ಪ್ರತ್ಯೇಕ ಕೊಠಡಿ, ಅಡುಗೆ ಮನೆ ನೆಲಕ್ಕೆ ಟೈಲ್ಸ್, ನೀರಿನ ತೊಟ್ಟಿ, ಓವರ್ ಹೆಡ್ ಟ್ಯಾಂಕ್, ಕಾಂಪೌಂಡ್, ನೆಲಹಾಸು, ವಿದ್ಯುತ್ ವ್ಯವಸ್ಥೆ, ಗೋಡೆ ವಿನ್ಯಾಸ, ಕಪಾಟು, ಕಿಟಕಿ, ಬಾಗಿಲು ಸೇರಿ ಉನ್ನತೀಕರಣ ಮಾಡಿಸಿದ ನಂತರ ಅನುದಾನಕ್ಕೆ ಮಂಜೂರಾತಿ ನೀಡಬೇಕು.

ಕುರಂಕೋಟೆ ಗ್ರಾಪಂ ಕಾರ್ಯದರ್ಶಿ ಪ್ರಭಾರ ಪಿಡಿಒ ಆಗಿದ್ದ ಲಕ್ಷ್ಮಣ್ ನಿಯಮ ಉಲ್ಲಂಘಿಸಿ ಅನುದಾನ ದುರ್ಬಳಕೆ ಮಾಡಿದ್ದು, ಈ ಬಗ್ಗೆ ತನಿಖೆ ನಡೆಸಿರುವ ತಾಪಂ ಸಹಾಯಕ ಲೆಕ್ಕಾಧಿಕಾರಿ ತನಿಖಾ ವರದಿ ಇಒ, ಜಿಪಂ ಸಿಇಒ ಮತ್ತು ಭ್ರಷ್ಟಚಾರ ನಿಗ್ರಹದಳ ಕಚೇರಿಗೆ ಪಿಡಿಒ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ಸಲ್ಲಿಸಿದ್ದಾರೆ.

ಹಲವೆಡೆ ಅವ್ಯವಹಾರದ ಶಂಕೆ

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಪಂ ಎಇಇ, ತಾಪಂ ಮತ್ತು ಗ್ರಾಪಂ ಅಧ್ಯಕ್ಷ ಅನುಮತಿ ಇಲ್ಲದೆ ಗ್ರಾಪಂ ಪಿಡಿಒ ಹಣ ಬಿಡುಗಡೆ ಮಾಡಿರುವುದರಿಂದ ಅಂಗನವಾಡಿ ದುರಸ್ತಿ ಸ್ಥಗಿತಗೊಂಡಿದೆ. ಬ್ಯಾಂಕ್ ವ್ಯವಹಾರದ ದಾಖಲೆ ಗ್ರಾಪಂಗೆ ಒದಗಿಸದೆ ಹಣ ಲೂಟಿ ಮಾಡಿದ್ದಾರೆ.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ 2018-19ನೇ ಸಾಲಿನಲ್ಲಿ ಕೊರಟಗೆರೆಯ ಕುರಂಕೋಟೆ, ಹಂಚಿಹಳ್ಳಿ, ಕೋಳಾಲ, ಪಾತಗಾನಹಳ್ಳಿ, ಅಕ್ಕಿರಾಂಪುರ, ತುಂಬಾಡಿ, ಬೂದಗವಿ ಮತ್ತು ಅರಸಾಪುರ ಗ್ರಾಪಂಗೆ ಎಸ್‌ಸಿಪಿ ಯೋಜನೆಯಡಿ ಅಂಗನವಾಡಿ ಕೇಂದ್ರಗಳ ಉನ್ನತೀಕರಣಕ್ಕಾಗಿ ತಲಾ ೨ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಅಂಗನವಾಡಿ ಉನ್ನತೀಕರಣ ಆಗದೆ ಅನುದಾನ ಖರ್ಚಾಗಿದೆ ಎನ್ನಲಾಗಿದ್ದು, ಈ ಬಗ್ಗೆಯೂ ಸೂಕ್ತ ತನಿಖೆ ನಡೆಸಬೇಕಾಗಿದೆ.

ಕಿರಣ್ ಕುಮಾರ್ ಕೆ ಎಲ್

Related