9 ಮಂದಿ ಅಲ್ ಖೈದಾ ಉಗ್ರರ ಬಂಧನ

9 ಮಂದಿ ಅಲ್ ಖೈದಾ ಉಗ್ರರ ಬಂಧನ

ನವದೆಹಲಿ: ಅಲ್ ಖೈದಾ ಉಗ್ರಗಾಮಿ ಸಂಘಟನೆಗೆ ಸೇರಿದ 9 ಮಂದಿ ಉಗ್ರರನ್ನು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆ ಮತ್ತು ಕೇರಳದ ಎರ್ನಾಕುಲಂ ಜಿಲ್ಲೆಯಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ಶನಿವಾರ ಬಂಧಿಸಿದೆ.

ಬಂಧಿತರನ್ನು ಮುರ್ಷಿದ್ ಹಸನ್, ಇಯಾಕುಬ್ ಬಿಸ್ವಾಸ್ ಮತ್ತು ಮೊಸರಫ್ ಹುಸೇನ್ ಎಂದು ಗುರುತಿಸಲಾಗಿದ್ದು ಇವರೆಲ್ಲರೂ ಎರ್ನಾಕುಲಂನಲ್ಲಿ ವಾಸವಾಗಿದ್ದರು ಎಂದು ಗೊತ್ತಾಗಿದೆ. ಪಶ್ಚಿಮ ಬಂಗಾಳದ ಮುರ್ಷಿದಾಬಾದ್‍ನಲ್ಲಿ ಸೆರೆ ಸಿಕ್ಕವರನ್ನು ನಜ್ಮುಸ್ ಸಾಕಿಬ್, ಅಬು ಸುಫಿಯಾನ್, ಮೈನುಲ್ ಮೊಂಡಲ್, ಲಿಯು ಯೀನ್ ಅಹ್ಮದ್, ಅಲ್ ಮಮುನ್ ಕಮಲ್ ಮತ್ತು ಅತಿತುರ್ ರೆಹಮಾನ್ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಡಿಜಿಟಲ್ ಉಪಕರಣ, ದಾಖಲೆಗಳು, ಜಿಹಾದಿ ಸಾಹಿತ್ಯ, ಹರಿತವಾದ ಆಯುಧಗಳು, ದೇಶೀ ನಿರ್ಮಿತ ಶಸ್ತ್ರಾಸ್ತ್ರಗಳು, ಸ್ಫೋಟಕ ತಯಾರಿಸುವ ಮಾರ್ಗದರ್ಶಿ ಪುಸ್ತಕಗಳನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಎನ್‍ಐಎ ತಿಳಿಸಿದೆ.
ದೇಶದ ಹಲವು ಕಡೆಗಳಲ್ಲಿ ಸಂಭಾವ್ಯ ದಾಳಿ ನಡೆಸಲು ಸಂಚು ರೂಪಿಸಿದ್ದ ಉಗ್ರರು ಹಣ ಸಂಗ್ರಹಿಸಿ ದೆಹಲಿಗೆ ಪ್ರಯಾಣಿಸಿ ಬಂದೂಕು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದುಬಂದಿದೆ.

Related