ಸಿರವಾರ: ದೀರ್ಘಾವಧಿ ಔಷಧಿ ಲಭ್ಯಕ್ಕೆ ಅಧಿಕಾರಿಗಳ ಸಾಥ್

ಸಿರವಾರ: ದೀರ್ಘಾವಧಿ ಔಷಧಿ ಲಭ್ಯಕ್ಕೆ ಅಧಿಕಾರಿಗಳ ಸಾಥ್

ಸಿರವಾರ : ದೇಶಾದ್ಯಂತ ಕೊರೊನಾ ವೈರಸ್ ಹಿನ್ನೆಲೆ ಜಿಲ್ಲೆಯಲ್ಲಿ ದೀರ್ಘಾವಧಿ ಔಷಧಿಗಳ ಕೊರತೆ ಉಂಟಾಗಿತ್ತು. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಯ ಅಧಿಕಾರಿಗಳು, ಔಷಧಿ ನಿಯಂತ್ರಣ ಅಧಿಕಾರಿಗಳು ಹಾಗೂ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃಧ್ಧಿ ಸಂಘದ ಪ್ರಯತ್ನದಿಂದ ಮೆಡಿಕಲ್ ಸ್ಟೋರ್ ಗಳಲ್ಲಿ ಸಕಲ ಔಷಧಿಗಳನ್ನು ಲಭ್ಯತೆ ಮಾಡುವಲ್ಲಿ ಸಫಲರಾಗಿದ್ದಾರೆ.

ಕೊರತೆಗೆ ಕಾರಣ
ದೇಶಕ್ಕೆ ಕೋವಿಡ್ 19 ವೈರಸ್ ಹಬ್ಬಿದ ನಂತರ ಸಾರಿಗೆ ಬಸ್ ಹಾಗೂ ಸರಕು ಸಾಗಾಣಿಕೆ, ಖಾಸಗಿ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಯಿತು. ತದನಂತರ ವಿತರಕರು ತಮ್ಮ ಸ್ವಂತ ವಾಹನಗಳಲ್ಲಿ ವಾರಕ್ಕೊಮ್ಮೆ ಔಷಧಿ ಪೂರೈಕೆ ಮಾಡುತ್ತಿದ್ದರು. ಇದರಿಂದ ಪ್ರತಿದಿನ ಬೇಕಾಗುವ ಮಾತ್ರೆಗಳು ಮತ್ತು ದೀರ್ಘಕಾಲಿಕ ಮಾತ್ರೆಗಳ ಕೊರತೆ ಉಂಟಾಗಿತ್ತು. ಇನ್ನು ಕೆಲವು ಮೆಡಿಕಲ್ ಸ್ಟೋರ್ ಗಳಲ್ಲಿ ಉಳಿದಿದ್ದ ದೀರ್ಘಾವಧಿ ರೋಗಕ್ಕೆ ಬೇಕಾಗುವ ಮಾತ್ರೆಗಳನ್ನು ಕೆಲವು ರೋಗಿಗಳು ಭಯ ಭೀತರಾಗಿ ವರ್ಷಕ್ಕಾಗುವಷ್ಟು ಖರೀದಿಸಿದ್ದು ಕೂಡ ಔಷಧಿ ಕೊರತೆಗೆ ಕಾರಣವಾಯಿತು.

ಅಧಿಕಾರಿಗಳ ಶ್ರಮ, ಔಷಧಿ ಲಭ್ಯ
ಆಂಟಿಬಯೋಟಿಕ್ಸ್, ಮೂರ್ಛೆರೋಗ, ಮಾನಸಿಕ ರೋಗ, ಬಿ.ಪಿ, ಶುಗರ್, ಥೈರಾಯ್ಡ್, ಹೃದಯ ಸಂಬಂಧಿ ಕಾಯಿಲೆಗೆ ತೆಗೆದುಕೊಳ್ಳುವ ಮಾತ್ರೆಗಳ ಕೊರತೆಯಿಂದಾಗಿ ರೋಗಿಗಳು ಪರದಾಡುವಂತಾಗಿತ್ತು. ಇದನ್ನರಿತ ಔಷಧಿ ನಿಯಂತ್ರಣ ಇಲಾಖೆಯ ಅಧಿಕಾರಿಗಳು ಜಿಲ್ಲೆಯಾದ್ಯಂತ 300 ಕ್ಕೂ ಅಧಿಕ ವಿತರಕರು ಮತ್ತು 1062 ಮೆಡಿಕಲ್ ಸ್ಟೋರ್‍ಗಳ ನಡುವೆ ಸಂಪರ್ಕ ಸಾಧಿಸಿ, ಆಸ್ಪತ್ರೆ ಹಾಗೂ ಮೆಡಿಕಲ್ ಸ್ಟೋರ್‍ಗಳಲ್ಲಿ ಔಷಧಿಗಳು ದೊರೆಯುವಂತೆ ಮಾಡುವಲ್ಲಿ ಸಫಲರಾದರು.

ಪ್ಯಾರಸಿಟಮಾಲ್ ಮಾರಾಟಕ್ಕೆ ಅಧಿಕಾರಿಗಳ ಬಿಗಿ ಕ್ರಮ
ಕೊರೊನಾ ಹಾವಳಿಯ ನಂತರದ ದಿನಗಳಲ್ಲಿ ಎಲ್ಲೆಡೆ ಪ್ಯಾರಸಿಟಮಾಲ್ ಮಾತ್ರೆ ಸೇವನೆ ಅಧಿಕವಾಗಿ ಕೊರೊನಾ ಪೀಡಿತರ ಪತ್ತೆ ಹಚ್ಚುವಲ್ಲಿ ತೊಂದರೆಯಾಗುತ್ತಿತ್ತು. ಆದ್ದರಿಂದ ಯಾವುದೇ ಕಂಪನಿಯ ಪ್ಯಾರಸಿಟಮಾಲ್ ಮಾತ್ರೆಗಳನ್ನು ಮಾರಾಟ ಮಾಡಲು ವೈದ್ಯರ ಚೀಟಿ ಕಡ್ಡಾಯ ಮಾಡಲಾಗಿತ್ತು. ಜಿಲ್ಲೆಯ ಎಲ್ಲಾ ಮೆಡಿಕಲ್ ಸ್ಟೋರ್ಸ್‍ಗಳಿಗೆ ಯಾವುದೇ ಮಾತ್ರೆಗಳನ್ನು ನೀಡಿದರು. ಅದನ್ನು ಪ್ರತಿದಿನವೂ ಕಡ್ಡಾಯವಾಗಿ ನಮೂದಿಸಿ ಔಷÀಧಿ ನಿಯಂತ್ರಣ ಇಲಾಖೆಗೆ ವಾಟ್ಸಪ್ ಗ್ರೂಪಿಗೆ ಸಲ್ಲಿಸಲು ಸೂಚನೆ ನೀಡಲಾಗಿದೆ. ಒಂದು ವೇಳೆ ಸೂಚನೆ ತಪ್ಪಿದ್ದಲ್ಲಿ ಕಠಿಣಕ್ರಮ ಕೈಗೊಳ್ಳಲಾಗುವುದು ಹಾಗೂ ಒಂದು ವೇಳೆ ಯಾವುದಾದರೂ ಔಷಧಿಗಳ ಕೊರತೆ ಉಂಟಾಗಿದ್ದರೆ ಅದರ ಲಭ್ಯತೆಗೆ ಪ್ರಯತ್ನವನ್ನು ಮಾಡಲಾಗುತ್ತಿದೆ ಎಂದು ಔಷಧಿ ನಿಯಂತ್ರಣ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.

**
ಕಳೆದ ವಾರದ ಹಿಂದೆ ಸಿಇಓ ಅವರ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಔಷಧಿ ಇಲಾಖೆಯ ಅಧಿಕಾರಿಗಳ ಸಭೆ ಕರೆಯಲಾಗಿತ್ತು. ಈ ಸಭೆಯಲ್ಲಿ ಔಷಧಿ ಕೊರತೆಗೆ ಮುಖ್ಯಕಾರಣ ತಿಳಿಸಿದ್ದಾರೆ. ಅದರಂತೆ ಇನ್ನು ಮುಂದೆ ಔಷಧಿಗಳ ಕೊರತೆಯಾಗದಂತೆ ನೋಡಿಕೊಳ್ಳುವ ಭರವಸೆಯನ್ನು ಅಧಿಕಾರಿಗಳು ನೀಡಿದ್ದಾರೆ.

-ರಾಮಕೃಷ್ಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ರಾಯಚೂರು.

**
ಲಾಕ್‍ಡೌನ್ ಘೋಷಣೆ ನಂತರ ದೀರ್ಘಾವಧಿ ರೋಗಗಳಿಂದ ಬಳಲುತ್ತಿರುವ ರೋಗಿಗಳು ಮೆಡಿಕಲ್ ಸ್ಟೋರ್‍ಗಳಲ್ಲಿ ತಮಗೆ ಬೇಕಾಗುವ ಔಷಧಿಗಳನ್ನು ವರ್ಷಕ್ಕಾಗುವಷ್ಟು ತೆಗೆದುಕೊಂಡಿರುವುದರಿಂದ ಕೊರತೆ ಉಂಟಾಗಿತ್ತು. ಈಗ ಔಷಧಿ ವ್ಯಾಪಾರಿಗಳ ಸಂಘ ಮತ್ತು ಔಷಧಿ ನಿಯಂತ್ರಣ ಅಧಿಕಾರಿಗಳ ಜೊತೆ ಸೇರಿ ಜಿಲ್ಲೆಯಾದ್ಯಂತ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.

-ಟಿ. ವೆಂಕಟೇಶ, ಕಾರ್ಯದರ್ಶಿಗಳು ಜಿಲ್ಲಾ ಔಷಧಿ ವ್ಯಾಪಾರಿಗಳ ಕ್ಷೇಮಾಭಿವೃದ್ಧಿ ಸಂಘ.

Related