ಆಮ್ಲಜನಕ ದುರಂತಕ್ಕೆ ವರ್ಷವಾದ್ರೂ ಸಿಗದ ನ್ಯಾಯ

  • In Crime
  • May 2, 2022
  • 943 Views

ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಸಕಾಲದಲ್ಲಿ ಆಮ್ಲಜನಕ ಪೂರೈಕೆಯಾಗದೆ ಹಲವಾರು ರೋಗಿಗಳು ಮೃತಪಟ್ಟ ಪ್ರಕರಣಕ್ಕೆ ಸೋಮವಾರ (ಮೇ ೨) ವರ್ಷ ತುಂಬುತ್ತದೆ. ಮೃತಪಟ್ಟವರಲ್ಲಿ ೨೪ ಮಂದಿಯ ಕುಟುಂಬಗಳಿಗೆ ಹೈಕೋರ್ಟ್ ಸೂಚನೆಯಂತೆ ಸ್ವಲ್ಪ ಪರಿಹಾರವನ್ನು ಸರ್ಕಾರ ನೀಡಿದ್ದು ಬಿಟ್ಟರೆ, ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಸಿಗುವಂತಹ ಬೆಳವಣಿಗೆಗಳು ಏನೂ ನಡೆದಿಲ್ಲ.
ಜಿಲ್ಲಾಡಳಿತ ಹಾಗೂ ಆಸ್ಪತ್ರೆಯ ಆಡಳಿತದ ನಿರ್ಲಕ್ಷ್ಯದಿಂದಾಗಿಯೇ ಈ ದುರಂತ ಸಂಭವಿಸಿದೆ ಎಂದು ಹೈಕೋರ್ಟ್ ನೇಮಿಸಿದ್ದ ತನಿಖಾ ಸಮಿತಿ ಹೇಳಿತ್ತು. ಆದರೆ, ಇದುವರೆಗೆ ಯಾವೊಬ್ಬ ಅಧಿಕಾರಿ, ವೈದ್ಯಾಧಿಕಾರಿಯ ವಿರುದ್ಧವೂ ಸರ್ಕಾರ ಕ್ರಮಕೈಗೊಂಡಿಲ್ಲ. ಸರ್ಕಾರದ ಅಂಕಿ ಅಂಶಗಳಲ್ಲಿ ಆ ದಿನ ೨೪ ಮಂದಿ ಮೃತಪಟ್ಟಿದ್ದಾರೆ ಎಂದಿದೆ. ೩೬ ಮಂದಿ ಮೃತಪಟ್ಟಿದ್ದಾರೆ ಎಂದು ಪ್ರಕರಣದ ತನಿಖೆಗಾಗಿ ಹೈಕೋರ್ಟ್ ನೇಮಿಸಿದ್ದ ತನಿಖಾ ಸಮಿತಿ ಅಭಿಪ್ರಾಯಪಟ್ಟಿತ್ತು.


ಅಲ್ಪ ಪರಿಹಾರ: 

ಕೆಲವು ಕುಟುಂಬಗಳಿಗೆ ಮಾತ್ರ ಹೆಚ್ಚುವರಿ ಪರಿಹಾರ ನೀಡಿದ್ದಕ್ಕೆ ಆಕ್ಷೇಪ ವ್ಯಕ್ತವಾಗಿತ್ತು. ಮೃತಪಟ್ಟ ಎಲ್ಲ ೩೬ ಮಂದಿಯ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂಬ ಆಗ್ರಹ ಕೇಳಿ ಬಂದಿತ್ತು. ದುರಂತದಲ್ಲಿ ಕೋವಿಡ್ ರೋಗಿಗಳು ಮಾತ್ರವಲ್ಲದೇ, ಕೋವಿಡ್ ಲಕ್ಷಣ ಇದ್ದರೂ ಸೋಂಕು ದೃಢಪಡದೆ ಇದ್ದವರೂ ಮೃತಪಟ್ಟಿದ್ದರು ಅವರ ಕುಟುಂಬದವರಿಗೆ ಪರಿಹಾರ ಸಿಕ್ಕಿಲ್ಲ.
ಹೈಕೋರ್ಟ್ ಸೂಚನೆ ಕೊಟ್ಟ ಬಳಿಕ ಸರ್ಕಾರ ಸ್ವಲ್ಪ ಪರಿಹಾರ ಕೊಟ್ಟಿದೆ. ನಮಗೆ ದುಡ್ಡೇನು ಮುಖ್ಯವಲ್ಲ. ನಿರ್ಲಕ್ಷ್ಯ ವಹಿಸಿ ಇಂತಹ ಘಟನೆಗೆ ಕಾರಣರಾದ ಜಿಲ್ಲಾಡಳಿತದ ಅಧಿಕಾರಿಗಳು, ಆಸ್ಪತ್ರೆಯ ವೈದ್ಯರು ಅಥವಾ ಆಮ್ಲಜನಕ ಪೂರೈಕೆ ಹೊಣೆ ಹೊತ್ತವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ನಗರದ ನಿವಾಸಿ, ನಗರಸಭೆ ಸದಸ್ಯರೂ ಆಗಿರುವ ಸಿ.ಜಿ.ಚಂದ್ರಶೇಖರ್ ಹೇಳಿದರು.

Related