ಮದಲೂರು ಕೆರೆಗೆ ನೀರು: ಸತ್ಯಕ್ಕೆ ದೊರೆತ ಜಯ

ಮದಲೂರು ಕೆರೆಗೆ ನೀರು: ಸತ್ಯಕ್ಕೆ ದೊರೆತ ಜಯ

ಬರಗೂರು : ಜಿಲ್ಲಾ ಉಸ್ತುವಾರಿ ಸಚಿವರಿಗೆ ಕೊನೆಗೂ ಜ್ಞಾನೋದಯವಾಗಿ, ಮದಲೂರು ಕೆರೆಗೆ ನೀರು ನಿಗದಿಯಾಗಿದ್ದು, ಕೆರೆಗೆ ನೀರು ಹರಿಸಲಾಗುವುದು ಎಂದು ಹೇಳಿರುವುದನ್ನು ಸತ್ಯಕ್ಕೆ ದೊರೆತ ಜಯವಾಗಿದೆ ಎಂದು ಮಾಜಿ ಸಚಿವ ಟಿ.ಬಿ.ಜಯಚಂದ್ರ ಹೇಳಿದರು.

ತಾಲ್ಲೂಕಿನ ಕಳ್ಳಂಬೆಳ್ಳ ಮತ್ತು ಶಿರಾ ಕೆರೆ ಭರ್ತಿಯಾದ ಹಿನ್ನೆಲೆಯಲ್ಲಿ ಮಂಗಳವಾರ ವೀಕ್ಷಣೆ ಮಾಡಿ ಮಾತನಾಡಿದರು.

ಮದಲೂರು ಕೆರೆಗೆ ನೀರು ನಿಗದಿಯಾಗಿಲ್ಲ ಎಂದು ಜಿಲ್ಲಾ ಸಚಿವರು ಇಷ್ಟು ದಿನ ಹೇಳುತ್ತಿದ್ದು, ಅವರ ಮೌಡ್ಯತೆಯನ್ನು ತೋರಿಸುತ್ತದೆ. ಜವಾಬ್ದಾರಿ ಸ್ಥಾನದಲ್ಲಿರುವವರು ಈ ರೀತಿ ಮಾತನಾಡಬಾರದು. ಈಗ ಅವರ ಹೇಳಿಕೆ ಗಮನಿಸಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಬಂದAತಾಗಿದೆ’ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರಿಗೆ ತಾಕತ್ತಿದ್ದರೆ ತುಮಕೂರು ಜಿಲ್ಲೆಯ ಪಾಲಿನ 25 ಟಿಎಂಸಿ ನೀರು ತರಲಿ, ಈ ಬಾರಿ ಕೇವಲ 9 ಟಿಎಂಸಿ ಅಡಿ ಮಾತ್ರ ಜಿಲ್ಲೆಗೆ ಹರಿದಿದೆ. ಉಳಿದ ನೀರು ಬಂದರೆ ಜಿಲ್ಲೆಯ ಎಲ್ಲ ಕೆರೆಗಳನ್ನು ತುಂಬಿಸಬಹುದು ಎಂದರು.

ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗಿ ಕೆರೆ, ಕಟ್ಟೆ, ಚೆಕ್ ಡ್ಯಾಂ ಮತ್ತು ಬ್ಯಾರೇಜ್‌ಗಳು ಭರ್ತಿಯಾಗಿರುವುದು ಸಂತಸ ತಂದಿದೆ. ನನ್ನ ಆಡಳಿತ ಅವಧಿಯಲ್ಲಿ ಅಂತರ್‌ಜಲ ಅಭಿವೃದ್ಧಿಗೆ ಕ್ಷೇತ್ರಾದ್ಯಂತ ಸುಮಾರು 121ಕ್ಕೂ ಹೆಚ್ಚಿನ ಚೆಕ್ ಡ್ಯಾಂ ಕಂ ಬ್ಯಾರೇಜ್ ನಿರ್ಮಾಣ ಮಾಡಿದ್ದು, ಸುಮಾರು 90ಕ್ಕೂ ಹೆಚ್ಚು ಬ್ಯಾರೇಜ್‌ಗಳು ಭರ್ತಿಯಾಗಿವೆ. ಇದರಿಂದ ಅಂತರ್‌ಜಲ ಮಟ್ಟ ಹೆಚ್ಚಿ ಈ ಬಾರಿ ಬೇಸಿಗೆಯಲ್ಲಿ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ ಎಂದರು.
ಚೆಕ್ ಡ್ಯಾಂ ವೀಕ್ಷಣೆ
ಬಸರಿಹಳ್ಳಿ, ಉಮಾಪತಿ ಹಳ್ಳಿ, ಮಲ್ಲಶೆಟ್ಟಿಹಳ್ಳಿ, ಹುಂಜಿನಾಳು, ಆಮಲಗೊಂದಿ, ದೊಡ್ಡಬಾಣಗೆರೆ ಸೇರಿದಂತೆ ಕೆಲ ಕಡೆ ಮಳೆಯಿಂದ ತುಂಬಿ ಹರಿಯುತ್ತಿರುವ ಚೆಕ್ ಡ್ಯಾಂ ಕಂ ಬ್ಯಾರೇಜ್ ವೀಕ್ಷಣೆ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಆರ್.ಮಂಜುನಾಥ್, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಹನುಮಂತಯ್ಯ, ಮುಖಂಡರಾದ ಅಮಾನುಲ್ಲಾ ಖಾನ್, ಬುರಾನುದ್ದೀನ್, ಅಬೀಬ್ ಖಾನ್, ಬಾಲೇನಹಳ್ಳಿ ಪ್ರಕಾಶ್, ಹಾಲೇನಹಳ್ಳಿ ಶಶಿಧರ್, ಕೆ.ಎಲ್.ದಿವಾಕರ್ ಗೌಡ, ನಟರಾಜ್, ಪಂಜಿಗನಹಳ್ಳಿ ತಿಪ್ಪೇಸ್ವಾಮಿ, ವಕೀಲ ರಾಕೇಶ್, ಅಜಯ್ ಕುಮಾರ್ ಇದ್ದರು.

Related