ʼಕಮಲದʼ ವಿರುದ್ಧ ʼಕೈʼ ಪ್ರತಿಭಟನೆ

ʼಕಮಲದʼ ವಿರುದ್ಧ ʼಕೈʼ ಪ್ರತಿಭಟನೆ

ಬೆಂಗಳೂರು: ಕೇಂದ್ರ ಬಿಜೆಪಿ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಬರ ಪರಿಹಾರ ನೀಡುವ ವಿಷಯದಲ್ಲಿ ಮಲತಾಯಿ ಧೋರಣೆ ಮಾಡಿದೆ ಎಂದು ಇಂದು (ಭಾನುವಾರ ಏಪ್ರಿಲ್ 28) ರಂದುಕೇಂದ್ರ ಸರ್ಕಾರದ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರ ನೇತೃತ್ವದಲ್ಲಿ ಮಂತ್ರಿ ಮಹೋದಯರು ಅವರ ನೇತೃತ್ವದಲ್ಲಿ ವಿಧಾನಸೌಧದಲ್ಲಿರುವ ಗಾಂಧಿ ಪ್ರತಿಮೆಯ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.

ರಾಜ್ಯದ ಬರಿ ಪರಿಹಾರ ವಿತರಣೆಗೆ ಸರ್ಕಾರ ಮಾಡಿದ್ದ ಬೇಡಿಕೆಗೆ ಅನುಸಾರವಾಗಿ ಕೇಂದ್ರ ಸರ್ಕಾರ 3,454 ಕೋಟಿ ರೂಪಾಯಿ ಬರ ಪರಿಹಾರ ಬಿಡುಗಡೆ ಮಾಡಿದೆ. ಆದರೆ ಇದು ರಾಜ್ಯದ ಬೇಡಿಕೆಯನ್ನು ಪೂರೈಸಲು ಈ ಪರಿಹಾರ ಮೊತ್ತ ಸಾಕಾಗುವುದಿಲ್ಲ. ಆನೆಯ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿ ಇಂದು ಮತ್ತೆ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿದರು.

ಬರ ಪರಿಹಾರ ಮೊತ್ತ ಬಿಡುಗಡೆಯಲ್ಲಿ ಕರ್ನಾಟಕ ಜನತೆಗೆ ಮೋಸ ಮಾಡಿದ ಬಿಜೆಪಿಗೆ ಧಿಕ್ಕಾರ…ಧಿಕ್ಕಾರ, ರೈತರಿಗೆ ಕಡಿಮೆ ಪರಿಹಾರ ಕೊಟ್ಟ ಬಿಜಪಿಗೆ ಧಿಕ್ಕಾರ ಎಂದು ಭಿತ್ತಿ ಫಲಕಗಳನ್ನು ಪ್ರದರ್ಶಿಸಿ, ಚೊಂಬು ಕೈಯಲ್ಲಿ ಹಿಡಿದು ಘೋಷಣೆ ಕೂಗಿದರು.

ಈ ವೇಳೆ ಕೈಯಲ್ಲಿ ಚೊಂಬು ಹಿಡಿದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬರ ಪರಿಹಾರ ಬಿಡುಗಡೆಗೆ ಮನವಿ ಸಲ್ಲಿಸಿದ ಒಂದು ವಾರದಲ್ಲಿ ಕೇಂದ್ರದ ತಂಡ ಬರಬೇಕು, ವೀಕ್ಷಣೆ ಮಾಡಿ ವರದಿ ಕೊಡಬೇಕು, ವರದಿ ಕೊಟ್ಟ ನಂತರ ಒಂದು ತಿಂಗಳಲ್ಲಿ ಪರಿಹಾರ ಬಿಡುಗಡೆ ಮಾಡಬೇಕು ಎಂದು ಕಾನೂನಿನಲ್ಲಿದೆ. ನಾವು ಅನಿವಾರ್ಯವಾಗಿ ಕೇಂದ್ರದ ವಿಳಂಬ ನೀತಿ ಕಂಡು ಸುಪ್ರೀಂ ಕೋರ್ಟ್ ಗೆ ಹೋಗಬೇಕಾಯಿತು ಎಂದರು.

ಈ ವೇಳೆ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್, ಕಳೆದ ಸೆಪ್ಟೆಂಬರ್ ನಿಂದ ಇಲ್ಲಿಯವರೆಗೆ 50 ಸಾವಿರ ಕೋಟಿ ರೂಪಾಯಿ ಹಾನಿಯಾಗಿದೆ. ಅನೇಕರಿಗೆ ಉದ್ಯೋಗ ಸಿಕ್ಕಿಲ್ಲ. ನರೇಗಾ ವಿಚಾರದಲ್ಲಿ ಕೂಲಿ ಮಾಡಲು ಹಣ ಕೊಟ್ಟಿಲ್ಲ. ನಮ್ಮ ಹಕ್ಕನ್ನು ನಾವು ಕೇಳುತ್ತಿದ್ದೇವೆ. ಸೆಪ್ಟೆಂಬರ್ ತಿಂಗಳಿನಿಂದ ಆಗಿರುವ ನಷ್ಟವನ್ನು ಸೇರಿಸಿ ಕೇಂದ್ರ ಸರ್ಕಾರ ಪರಿಹಾರ ನೀಡಬೇಕು. ನಮ್ಮ ಹೋರಾಟ ಇಲ್ಲಿಗೆ ನಿಲ್ಲುವುದಿಲ್ಲ, ಮುಂದುವರಿಯುತ್ತದೆ ಎಂದರು.

ಈ ಸಂದರ್ಭದಲ್ಲಿ ಸಚಿವರಾದ ಡಾ. ಜಿ. ಪರಮೇಶ್ವರ, ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಚಲುವರಾಯಸ್ವಾಮಿ, ದಿನೇಶ್ ಗುಂಡೂರಾವ್, ಕೆ ಎಚ್ ಮುನಿಯಪ್ಪ, ಶಾಸಕರಾದ ಎಚ್ ಸಿ ಬಾಲಕೃಷ್ಣ, ರಿಜ್ವಾನ್ ಅರ್ಷದ್ ಮತ್ತಿತರರು ಭಾಗವಹಿಸಿದ್ದರು.

 

Related