ಕೊಪ್ಪಳ: ಈ ಬಾರಿ ನಡೆಯಲಿರುವ ಜನವರಿ 26ರಂದು ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕೊಪ್ಪಳ ಜಿಲ್ಲೆಯ ಯೋಗಾಪಟುಗಳಿಗೆ ಆಹಾರ ಸಿಕ್ಕಿದೆ ಎಂದು ತಿಳಿದುಬಂದಿದೆ.
ಹೌದು, ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೆಹಲಿಯಲ್ಲಿ ಜನವರಿ 26 ರಂದು ಗಣರಾಜ್ಯೋತ್ಸವದ ದಿನದಂದು ದೇಶದಾದ್ಯಂತ ವಿವಿಧ ಕಲಾವಿದರಿಂದ ಕಲಾ ಪ್ರದರ್ಶನ ಮಾಡುತ್ತಾರೆ. ಅದರಂತೆ ಕೊಪ್ಪಳ ಜಿಲ್ಲೆಯ ರೇಷ್ಮಾ ವಡ್ಡಟ್ಟಿ ಎನ್ನುವ ಯೋಗ ಪಟು ಆಯ್ಕೆಯಾಗಿದ್ದಾರೆ.
ಕೊಪ್ಪಳ ತಾಲೂಕಿನ ಘಟ್ಟಿರಡ್ಡಿಹಾಳ ಗ್ರಾಮದ ಯೋಗಪಟು ರೇಷ್ಮಾ ವಡ್ಡಟ್ಟಿ ಅವರಿಗೆ ಆಯುಷ್ ಮಂತ್ರಾಲಯದಿಂದ ಆಹ್ವಾನ ನೀಡಲಾಗಿದೆ. ರಾಜ್ಯದಿಂದ ಒಟ್ಟು 18 ಜನ ಯೋಗಪಟುಗಳಿಗೆ ಆಹ್ವಾನ ದೊರೆತಿದ್ದು, ರೇಷ್ಮಾ ವಡ್ಡಟ್ಟಿ ಸೇರಿ ಕೊಪ್ಪಳ ಜಿಲ್ಲೆಯ ಇಬ್ಬರಿಗೆ ಆಹ್ವಾನ ಹುಡುಕಿ ಬಂದಿದೆ. ಆಯುಷ್ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಯೋಗ ತರಬೇತುದಾರರಾಗಿರುವ ರೇಷ್ಮಾ ಅವರು ಕೇಂದ್ರ ಸಚಿವರು ಏರ್ಪಡಿಸಿರುವ ಔತಣಕೂಟದಲ್ಲಿ ಭಾಗಿಯಾಗಲಿದ್ದಾರೆ.
ಗ್ರಾಮೀಣ ಭಾಗದ ಯುವತಿ ರೇಷ್ಮಾ ಯೋಗ ಶಿಕ್ಷಣದಲ್ಲಿ ಎಂಎ ಪದವಿಧರೆಯಾಗಿದ್ದು, ಜನವರಿ 26 ರಂದು ದೆಹಲಿಯ ಕೆಂಪುಕೋಟೆಯಲ್ಲಿ ಪರೇಡ್ನಲ್ಲಿ ಭಾಗಿಯಾಗಲಿದ್ದಾರೆ. ಸದ್ಯ ರಾಜ್ಯದ ವಿವಿಧೆಡೆ ಯೋಗ ಪ್ರದರ್ಶನ ನೀಡುತ್ತಿರುವ ರೇಷ್ಮಾ, “ಇಂಥ ಅವಕಾಶ ಸಿಕ್ಕಿರುವುದು ಖುಷಿಯಾಗಿದೆ” ಎಂದು ತಿಳಿಸಿದ್ದಾರೆ. ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕಾತುರದಲ್ಲಿದ್ದೇನೆ ಎಂದು ಸಂತಸ ಹಂಚಿಕೊಂಡಿದ್ದಾರೆ.