ನೂತನ ಸಂಸತ್‌ ಭವನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ

ನೂತನ ಸಂಸತ್‌ ಭವನದಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡನೆ

ನವದೆಹಲಿ, ಸೆ.19: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಮಹಿಳಾ ಮತದಾರರ ಬಹು ವರ್ಷಗಳ ಬೇಡಿಕೆಯನ್ನು ಈಡೇರಿಸುವ ಮೂಲಕ ವಿರೋಧ ಪಕ್ಷಗಳಿಗೆ ಭರ್ಜರಿ ಟಕ್ಕರ್ ಕೊಟ್ಟಿದ್ದಾರೆ. ಹೌದು,ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಒದಗಿಸುವ ಐತಿಹಾಸಿಕ ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದ್ದು, ಹೊಸ ಸಂಸತ್ ಭವನದ ಲೋಕಸಭೆಯಲ್ಲಿ ಮಂಡನೆಯಾಗಲಿದೆ.

ಕಳೆದ ಮೂರು ದಶಕಗಳಿಂದ ಒಂದಲ್ಲೊಂದು ಕಾರಣಗಳಿಂದ ಮುಂದೂಡಿಕೆಯಾಗಿದ್ದ ಮಹಿಳಾ ಮೀಸಲಾತಿ ಮಸೂದೆಯನ್ನು ಪ್ರಸ್ತುತ ನಡೆಯುತ್ತಿರುವ 5 ದಿನಗಳ ವಿಶೇಷ ಅಧಿವೇಶನದಲ್ಲಿ ಮಂಡಿಸಿ ಸಂಸತ್ತಿನ ಉಭಯ ಸದನಗಳಾದ ಲೋಕಸಭೆ ಮತ್ತು ರಾಜ್ಯ ಸಭೆಗಳಲ್ಲಿ ಒಮ್ಮತದಿಂದ ಅಂಗೀಕರಿಸಿ ನಂತರ ರಾಷ್ಟ್ರಪತಿಗಳ ಅಂಗೀಕಾರಕ್ಕೆ ಕಳಿಸಿಕೊಡಲಾಗುತ್ತಿದೆ. ಮಸೂದೆಯು ಕಾಯಿದೆಯಾಗಿ ಜಾರಿಗೆ ಬಂದ ನಂತರ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ನೀಡಬೇಕು. ಪ್ರತಿ ರಾಜಕೀಯ ಪಕ್ಷವು ತನ್ನ ಟಿಕೆಟ್‍ಗಳ ಶೇ 20ರಷ್ಟನ್ನು ಮಹಿಳೆಯರಿಗೆ ಹಂಚಬೇಕು ಎಂದು ಕೇಂದ್ರ ಆಹಾರ ಸಂಸ್ಕರಣಾ ಕೈಗಾರಿಕೆ ಮತ್ತು ಜಲಶಕ್ತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಟ್ವೀಟ್ ಮಾಡಿ, ಮಹಿಳಾ ಮೀಸಲಾತಿ ಬೇಡಿಕೆಯನ್ನು ಈಡೇರಿಸುವ ನೈತಿಕ ಧೈರ್ಯ ಮೋದಿ ಸರ್ಕಾರಕ್ಕೆ ಮಾತ್ರ ಇದೆ. ಇದು ಸಂಪುಟದ ಅನುಮೋದನೆಯೊಂದಿಗೆ ಸಾಬೀತಾಗಿದೆ ಎಂದು ಹೇಳಿದ್ದಾರೆ.

ಮೀಸಲಾತಿ ಶೇ.20 ಸೀಟುಗಳನ್ನು ಮೀರಬಾರದು. ಒಬಿಸಿ ಮತ್ತು ಅಲ್ಪಸಂಖ್ಯಾತರಿಗೆ ಸೇರಿದ ಮಹಿಳೆಯರಿಗೆ ಕೋಟಾ ಇರಬೇಕು.ಅಲ್ಲದೆ,ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಮಹಿಳೆಯರಿಗೆ ಮೂರನೇ ಒಂದರಷ್ಟು ಮೀಸಲಾತಿಯನ್ನು ನೀಡಬೇಕು.ಶೇ.33ರಷ್ಟು ಮೀಸಲಾತಿ ಅನುಷ್ಠಾನಕ್ಕೆ ಬಂದರೆ ಲೋಕಸಭೆಯಲ್ಲಿ 180 ಸ್ಥಾನ ಹಾಗೂ ರಾಜ್ಯಸಭೆಯ 250 ಸ್ಥಾನಗಳಲ್ಲಿ 82 ಸ್ಥಾನಗಳನ್ನು ಮಹಿಳೆಯರು ಆಲಂಕರಿಸಲಿದ್ದಾರೆ ಎಂದು ತಿಳಿಸಿದ್ದಾರೆ.

Related