ಪತ್ರಕರ್ತರಿಗೆ ಕ್ಷೇಮಾಭಿವೃದ್ದಿ ನಿಧಿ ಮೀಸಲಿಡಲು ಮನವಿ

ಪತ್ರಕರ್ತರಿಗೆ ಕ್ಷೇಮಾಭಿವೃದ್ದಿ ನಿಧಿ ಮೀಸಲಿಡಲು ಮನವಿ

ಬೆಂಗಳೂರು: ಸಂವಿಧಾನದ ಐದನೇ ಅಂಗ ಪತ್ರಿಕೋದ್ಯಮ. ಪತ್ರಕರ್ತರಿಗೆ ವಾಕ್ ಸ್ವಾತಂತ್ರ್ಯ, ಬರಹ ಸ್ವಾತಂತ್ರ್ಯ ಎಲ್ಲವೂ ಇದೆ. ತಮ್ಮ ಲೇಖನಿ ಮೂಲಕ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಕಾಯಕವನ್ನು ಮಾಡುತ್ತಾರೆ. ಆದರೆ, ಅವರಿಗಾಗಲೀ, ಅವರ ಕುಟುಂಬಕ್ಕಾಗಲೀ ಯಾವುದೇ ಭದ್ರತೆ ಇಲ್ಲದಿರುವುದು ದುರಂತ.
ಪತ್ರಕರ್ತರಿಗಾಗಲೀ ಅವರ ಕುಟುಂಬದವರಿಗಾಗಲೀ ಆರೋಗ್ಯ ಹದಗೆಟ್ಟಾಗ, ಚಿಕಿತ್ಸೆ ವೆಚ್ಚಕ್ಕಾಗಿ ಪರದಾಡುವ ಸ್ಥಿತಿ ಬಂದೊದಗಿದೆ. ಇಂದಿಗೂ ಎಷ್ಟೋ ಪತ್ರಕರ್ತರು ಸಮಾಜದ ಸ್ವಾತಂತ್ರ್ಯ ಕಾಪಾಡುವತ್ತ ಮುಂದಡಿ ಇಡುತ್ತಾ, ಆರ್ಥಿಕವಾಗಿ ಹಿಂದುಳಿದಿದ್ದಾರೆ. ಅಂತಹ ಪತ್ರಕರ್ತರ ಭದ್ರತೆಗಾಗಿ ಈ ಭಾರಿ ಬಜೆಟ್‌ನಲ್ಲಿ ಪತ್ರಕರ್ತರಿಗಾಗಿ ಕ್ಷೇಮಾಭಿವೃದ್ದಿ ನಿಧಿ ಮೀಡಲಿಡುವಂತೆ ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್ (ರಿ) ರವರು ಮುಖ್ಯಮಂತ್ರಿಗಳನ್ನು ಇಂದು ಮುಖ್ಯಮಂತ್ರಿಗಳ ಗೃಹಕಚೇರಿಯಲ್ಲಿ ಭೇಟಿಯಾಗಿ ಮನವಿ ಮಾಡಿದರು.
ರಾಜ್ಯದಲ್ಲಿ ಪತ್ರಕರ್ತರಿಗೆ ಆರೋಗ್ಯ ಕರ್ನಾಟಕ ಕಾರ್ಡ್ ಇದೆ. ಆದರೆ, ಅದು ಹಲವಾರು ತಾಂತ್ರಿಕ ಸಮಸ್ಯೆ ಮತ್ತು ಇತರ ಕಾರಣಗಳಿಂದ ನಿಷ್ಕ್ರಿಯಗೊಂಡಿದೆ. ಈಗಾಗಲೇ ವಾರ್ತಾ ಇಲಾಖೆ ಮೂಲಕ ವಿತರಣೆಯಾಗಿರುವ ಕಾರ್ಡ್ಗಳಿಂದ ಪತ್ರಕರ್ತರಿಗೆ ಯಾವುದೇ ಪ್ರಯೋಜನ ದೊರೆಯುತ್ತಿಲ್ಲ. ಈ ಬಗ್ಗೆ ಇಲಾಖೆಗೆ ಸಾಕಷ್ಟು ಬಾರಿ ಗಮನಕ್ಕೆ ತರಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿಲ್ಲ.
ಅನಾರೋಗ್ಯಕ್ಕೆ ಒಳಗಾಗುವ ಪತ್ರಕರ್ತರು ಪ್ರತಿ ಭಾರಿಯೂ ಚಿಕಿತ್ಸೆಗಾಗಿ ನೆರವು ಕೋರಲು ತಮ್ಮ ಜನಪ್ರತಿನಿಧಿಗಳು ಮತ್ತು ಮುಖ್ಯಮಂತ್ರಿಗಳ ಕಛೇರಿಗೆ ಅರ್ಜಿ ಹಿಡಿದು ಅಲೆಯಬೇಕು. ಪ್ರತಿ ವರ್ಷ ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋರಿ ನೂರಾರು ಪತ್ರಕರ್ತರು ಅರ್ಜಿ ಸಲ್ಲಿಸುತ್ತಿದ್ದಾರೆ. ಇವರ ಪೈಕಿ ಕೆಲವರಿಗೆ ಮಾತ್ರ ನೆರವು ಸಿಗುತ್ತಿದ್ದು ಉಳಿದವರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ.
ಪತ್ರಕರ್ತರಿಗೆ ತಾವು ಪರಿಹಾರ ನೆರವನ್ನು ಬಿಡಿಬಿಡಿಯಾಗಿ ಕೊಡುವ ಬದಲು ಪತ್ರಕರ್ತರ ಆರೋಗ್ಯಕ್ಕಾಗಿ ಈ ಬಾರಿ ಬಜೆಟ್‌ನಲ್ಲಿ ಕನಿಷ್ಠ ೫ ಕೋಟಿ ರೂಪಾಯಿಗಳ ಕ್ಷೇಮಾಭಿವೃದ್ದಿ ಒದಗಿಸಬೇಕು. ಆ ನಿಧಿ ಪತ್ರಕರ್ತರ ಆರೋಗ್ಯ ಮತ್ತು ಚಿಕಿತ್ಸಾ ವೆಚ್ಚಕ್ಕೆ ಮಾತ್ರ ಸೀಮಿತವಾಗಿರುವಂತೆ ಮಾಡಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಕರ್ನಾಟಕ ಮೀಡಿಯಾ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷರಾದ ಜಿ. ಚಂದ್ರಶೇಖರ್, ಗೌರವ ಅಧ್ಯಕ್ಷರಾದ ಶಿವಕುಮಾರ್ ಬೆಳ್ಳಿತಟ್ಟೆ, ಪ್ರಧಾನ ಕಾರ್ಯದರ್ಶಿಗಳಾದ ನಕಿರೆಕಂಟಿ ಸ್ವಾಮಿ, ಉಪಾಧ್ಯಕ್ಷರಾದ ಮಂಜುನಾಥ್, ಪದಾಧಿಕಾರಿಗಳಾದ ಶಶಿಕುಮಾರ್, ಸುರೇಶ್, ಲಿಂಗರಾಜು, ನರಸಿಂಹ ಮುಂತಾದವರು ಉಪಸ್ಥಿತರಿದ್ದರು.

Related