ಮತ ಚಲಾಯಿಸುವುದು ಎಲ್ಲರ ಆದ್ಯ ಕರ್ತವ್ಯ: ತುಷಾರ್ ಗಿರಿ ನಾಥ್

ಮತ ಚಲಾಯಿಸುವುದು ಎಲ್ಲರ ಆದ್ಯ ಕರ್ತವ್ಯ: ತುಷಾರ್ ಗಿರಿ ನಾಥ್

ಬೆಂಗಳೂರು: ಲೋಕಸಭಾ ಚುನಾವಣೆಯ ಪ್ರಯುಕ್ತ ನಗರದಲ್ಲಿರುವ ಮತದಾರದಲ್ಲಿ ಜಾಗೃತಿ ಮೂಡಿಸುವ ಸಲುವಾಗಿ, ನಮ್ಮ ಬೆಂಗಳೂರು ಐಕಾನ್ ಗಳ ನಿಯೋಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಹೌದು, ಏಪ್ರಿಲ್ 26ರಂದು ಕರ್ನಾಟಕ ರಾಜ್ಯದಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 4 ಪ್ರಮುಖ ವ್ಯಕ್ತಿಗಳನ್ನು ‘ನಮ್ಮ ಬೆಂಗಳೂರು ಐಕಾನ್ಸ್(ರಾಯಭಾರಿ)” ಗಳಾಗಿ ನಿಯೋಜನೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ತಿಳಿಸಿದರು.

“ನಮ್ಮ ಬೆಂಗಳೂರು ಐಕಾನ್ಸ್” ಕಾರ್ಯಕ್ರಮಕ್ಕೆ ಇಂದು ಪುಟ್ಟಣ್ಣ ಚೆಟ್ಟಿ ಪುರಭವನ (ಟೌನ್ ಹಾಲ್) ನಲ್ಲಿ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಮತದಾನ ಮಾಡುವ ಸಲುವಾಗಿ ನಗರದ ಜನತೆಗೆ ಉಮ್ಮಸ್ಸು ತುಂಬಿಸುವ ಸಲುವಾಗಿ ಹಾಗೂ ಚುನಾವಣಾ ಹಬ್ಬಕ್ಕಾಗಿ ಈ 4 ಪ್ರಮುಖ ವ್ಯಕ್ತಿಗಳು ರಾಯಭಾರಿಗಳಾಗಿ ನಮ್ಮ ಜೊತೆ ಕೈಜೋಡಿಸಿ ನಾಗರೀಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.

ಮತ ಚಲಾಯಿಸುವುದು ಎಲ್ಲರ ಆದ್ಯ ಕರ್ತವ್ಯ ಹಾಗೂ ಜವಾಬ್ದಾರಿಯಾಗಿದೆ. ಮತಗಟ್ಟೆಗಳ ಬಳಿ ಎಲ್ಲಾ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿರುತ್ತದೆ. ನಿಮಗೆ ಮತ ಚಲಾಯಿಸಲು ಇಷ್ಟವಿಲ್ಲದಿದ್ದರೆ ನೋಟ ಮಾಡಲು ಕೂಡಾ ಅವಕಾಶವಿದ್ದು, ಎಲ್ಲರೂ ಮತ ಚಲಾಯಿಸಲು ಮನವಿ ಮಾಡಿದರು.

ಚುನಾವಣಾ ರಾಯಭಾರಿಯಾದ ಖ್ಯಾತ ಚಿತ್ರನಟ ಹಾಗೂ ನಿರ್ದೇಶಕ ರಮೇಶ್ ಅರವಿಂದ್ ರವರು ಮಾತನಾಡಿ, ಏಪ್ರಿಲ್ 26 ರಂದು ಚುನಾವಣಾ ಹಬ್ಬವಿದ್ದು, ಎಲ್ಲರೂ ಸಡಗರದಿಂದ ಒಟ್ಟಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡೋಣ. ಒಂದು ಮತದಿಂದ ಎಲ್ಲವನ್ನೂ ಬದಲಿಸುವ ಶಕ್ತಿಯಿದೆ. ಆದ್ದರಿಂದ ಎಲ್ಲರೂ ತಪ್ಪದೆ ಮತದಾನ ಮಾಡಲು ತಿಳಿಸಿದರು.

ಚುನಾವಣಾ ರಾಯಭಾರಿಯಾದ ಬ್ಯಾಡ್ಮಿಂಟನ್ ಆಟಗಾರ ಅನುಪ್ ಶ್ರೀಧರ್ ರವರು ಮಾತನಾಡಿ, ಎಲ್ಲರೂ ತಪ್ಪದೆ ಮತದಾನ ಮಾಡುವುದು ನಮ್ಮೆಲ್ಲ ಕರ್ತವ್ಯ, ನಾವು ಮತದಾನ ಮಾಡಿಲ್ಲವಾದಲ್ಲಿ ನಾವು ಪ್ರಶ್ನೆ ಮಾಡಲು ಅರ್ಹರಿರುವುದಿಲ್ಲ. ಆದ್ದರಿಂದ ನಾವೆಲ್ಲರೂ ತಪ್ಪದೆ ಮತದಾನ ಮಾಡೋಣ ಎಂದು ಪ್ರೇರೇಪಿಸಿದರು.

ಚುನಾವಣಾ ರಾಯಭಾರಿಯಾದ ನಟಿ ಹಾಗೂ ರೂಪದರ್ಶಿ ನೀತು ವನಜಾಕ್ಷಿ ಮಾತನಾಡಿ, ನಮ್ಮ ನಾಯಕಯನ್ನು ನಾವು ಆಯ್ಕೆ ಮಾಡಬೇಕು. ಆದ ಕಾರಣ ಎಲ್ಲರೂ ತಮ್ಮ ಸ್ವಯಿಚ್ಛೆಯಿಂದ ಮುಂದೆ ಬಂದು ತಪ್ಪದೆ ಮತ ಚಲಾಯಿಸಬೇಕೆಂದು‌ ತಿಳಿಸಿದರು.

ಈ ವೇಳೆ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷಾದ ಕಾಂತರಾಜ್, ವಿಶೇಷ ಆಯುಕ್ತರಾದ ಸುರೋಲ್ಕರ್ ವಿಕಾಸ್ ಕಿಶೋರ್, ಸ್ವೀಪ್ ನೋಡಲ್ ಅಧಿಕಾರಿಯಾದ ಪ್ರತಿಭಾ, ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Related