ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮ

ಮತದಾನ ಜಾಗೃತಿ ಮೂಡಿಸುವ ಕಾರ್ಯಕ್ರಮ

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸಾರ್ವತ್ರಿಕ ವಿಧಾನಸಭಾ ಚುನಾವಣೆಯ ಅಂಗವಾಗಿ ಹಡ್ಸನ್ ವೃತ್ತದ ಕಬ್ಬನ್ ಪಾರ್ಕ್ ಮುಖ್ಯ ದ್ವಾರದ ಬಳಿ ಮತದಾನ ಜಾಗೃತಿ ಮೂಡಿಸಲು ಹಮ್ಮಿಕೊಂಡಿರುವ ಕಾಲ್ನಡಿಗೆ ಜಾಥ ಹಾಗೂ ಬೀದಿ ನಾಟಕ ಜಾಗೃತಿ ಕಾರ್ಯಕ್ರಮಕ್ಕೆ ಮಾನ್ಯ ಮುಖ್ಯ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾದ ಶ್ರೀ ತುಷಾರ್ ಗಿರಿ ನಾಥ್ ರವರು ಚಾಲನೆ ನೀಡಿದರು.

ಚಾಲನೆ ನೀಡಿದ ಬಳಿಕ ಮಾನ್ಯ ಮುಖ್ಯ ಚುನಾವಣಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಯಾದ ಶ್ರೀ ತುಷಾರ್ ಗಿರಿ ನಾಥ್ ರವರು ಮಾತನಾಡಿ, ಮತದಾನ ಪ್ರಮಾಣ ಕಡಿಮೆಯಾಗುತ್ತಿದ್ದು, ಅದನ್ನು ಹೆಚ್ಚಿಸುವ ನಿಟ್ಟಿನಲ್ಲಿ ಎಲ್ಲರೂ ಬಂದು ಮತದಾನ ಮಾಡಲು ಹಲವಾರು ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಮತದಾನ ದಿನವಾದ ಮೇ 10 ರಂದು ಎಲ್ಲರೂ ಬಂದು ತಪ್ಪದೆ ಮತ ಚಲಾಯಿಸಬೇಕು ಎಂದು ಕೋರಿದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಶ್ರೀ ಪ್ರತಾಪ್ ರೆಡ್ಡಿ ರವರು ಮಾತನಾಡಿ, ನಗರದಲ್ಲಿ ಮತದಾನ ಪ್ರಮಾಣ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

ಈ ವೇಳೆ ವಿಶೇಷ ಆಯುಕ್ತರಾದ ಡಾ. ತ್ರಿಲೋಕ್ ಚಂದ್ರ, ಡಾ. ಹರೀಶ್ ಕುಮಾರ್, ಬೆಂಗಳೂರು ನಗರ ಜಿಲ್ಲಾಧಿಕಾರಿಯಾದ ಡಾ. ದಯಾನಂದ, ಅಪರ ಮುಖ್ಯ ಚುನಾವಣಾಧಿಕಾರಿಯಾದ ರಾಜೇಂದ್ರ ಚೋಳನ್, ವಲಯ ಜಂಟಿ ಆಯುಕ್ತರಾದ ಪಲ್ಲವಿ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಅಮೃತ್ ರಾಜ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Related