ಬಿ.ನಾಗೇಂದ್ರ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಬಿ.ನಾಗೇಂದ್ರ ಅವರಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಬಳ್ಳಾರಿ: ಬಳ್ಳಾರಿ ತಾಲ್ಲೂಕಿನ ದಾಸರ ನಾಗೇನಹಳ್ಳಿ ಗ್ರಾಮದಲ್ಲಿ ಯುವಜನ ಸಬಲೀಕರಣ, ಕ್ರೀಡೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ನಾಗೇಂದ್ರ ಅವರು,  ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು. ಗ್ರಾಮದಲ್ಲಿ ರೂ.40 ಲಕ್ಷ ವೆಚ್ಚದ ಸಿಸಿ ರಸ್ತೆ ಮತ್ತು ಒಳಚರಂಡಿ ಕಾಮಗಾರಿಗೆ ಚಾಲನೆ ನೀಡಿದರು.

ನಂತರದಲ್ಲಿ ಜಿಲ್ಲಾ ಪಂಚಾಯತ್ ಮತ್ತು ತಾಲ್ಲೂಕು ಪಂಚಾಯತ್ ಇವರ ಆಶ್ರಯದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಉನ್ನತೀಕರಿಸಿದ ಕೂಸಿನ ಮನೆ ಉದ್ಘಾಟಿಸಿದರು.

ಗ್ರಾಮಸ್ಥರಿಂದ ಗ್ರಾಮದ ಮೂಲ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರ ಒದಗಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರ ಕುಂದು ಕೊರತೆಗಳ ಸಭೆ:

ಮೊದಲ ಬಾರಿಗೆ ಜಿಲ್ಲಾ ಉಸ್ತುವಾರಿ ಸಚಿವನಾದ ಬಳಿಕ, ನನ್ನ ತವರು ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಹಂತ ಹಂತವಾಗಿ ಅಭಿವೃದ್ದಿ ಮಾಡಲು ಪಣತೊಡಲಾಗಿದೆ ಎಂದು ಹೇಳಿದರು.

ಜಿಲ್ಲಾಡಳಿತದಿಂದ ಗ್ರಾಮದಲ್ಲಿ ವಯೋವೃದ್ಧರಿಗೆ ಪಿಂಚಣಿ, ರಾಜ್ಯ ಸರ್ಕಾರದ 5 ಗ್ಯಾರಂಟಿ ಯೋಜನೆಗಳು ತಲುಪುವಲ್ಲಿ ತೊಡಕಾಗುವ ಸಮಸ್ಯೆಗಳನ್ನು ವಿಚಾರಿಸಲಾಗುತ್ತದೆ ಮತ್ತು ಅವುಗಳಿಗೆ ಪರಿಹಾರ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ, ವೈದ್ಯಕೀಯ ಸೇವೆ, ಶಾಲೆ, ಅಂಗನವಾಡಿ ಕೇಂದ್ರ, ವಿದ್ಯುತ್, ಬಸ್ ಸಂಪರ್ಕ, ಚರಂಡಿ ವ್ಯವಸ್ಥೆ ಸೇರಿದಂತೆ ಹಂತ ಹಂತವಾಗಿ ಅಭಿವೃದ್ದಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು. ದಾಸರ ನಾಗೇನಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ನುಡಿದರು. ಬಳಿಕ ಸಾರ್ವಜನಿಕರಿಂದ ಸಮಸ್ಯೆಗಳ ಅಹವಾಲು ಸ್ವೀಕಾರ ಮಾಡಿದರು

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಹುಲ್ ಶರಣಪ್ಪ ಸಂಕನೂರ, ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ್, ಸಹಾಯಕ ಆಯುಕ್ತ ಹೇಮಂತ್.ಎನ್., ತಹಶೀಲ್ದಾರ ಗುರುರಾಜ, ತಾಲ್ಲೂಕು ಪಂಚಾಯತ್ ಇಓ ಮಡಗಿನ ಬಸಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಹಾಗೂ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

 

Related