ಸಾಮಾನ್ಯ ಕರ‍್ಯಕರ್ತನಿಗೆ ಮೇಲ್ಮನೆ ಸ್ಥಾನ

ಸಾಮಾನ್ಯ ಕರ‍್ಯಕರ್ತನಿಗೆ ಮೇಲ್ಮನೆ ಸ್ಥಾನ

ಮೂಡಲಗಿ: ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ರಾಜ್ಯಸಭೆಗೆ ಆಯ್ಕೆ ಮಾಡಿರುವುದು ನಿಜಕ್ಕೂ ಸಂತಸ ತಂದಿದೆ ಎಂದು ಕೆಎಂಎಫ್ ರಾಜ್ಯಾಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಈರಣ್ಣಾ ಕಡಾಡಿಯವರನ್ನು ಬಿಜೆಪಿಯು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿರುವುದು ಬೆಳಗಾವಿ ಜಿಲ್ಲೆಗೆ ಶೋಭೆ ತಂದಿದೆ ಎಂದು ಕರ್ನಾಟಕ ಹಾಲು ಮಹಾಮಂಡಳಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿಯವರು ನುಡಿದರು.

ಜೂ.೧೯ ರಂದು ೪ ಸ್ಥಾನಗಳಿಗಾಗಿ ನಡೆಯಬೇಕಿರುವ ರಾಜ್ಯಸಭಾ ಚುನಾವಣೆಗೆ ಬಿಜೆಪಿಯು ತನ್ನ ಎರಡು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಅದರಲ್ಲಿ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣದ ಈರಣ್ಣಾ ಕಡಾಡಿಯವರಿಗೆ ಟಿಕೇಟ್ ನೀಡಿದ್ದು, ಬೆಳಗಾವಿ ಜಿಲ್ಲೆ ಹಾಗೂ ಅರಭಾವಿ ವಿಧಾನಸಭಾ ಮತಕ್ಷೇತ್ರಕ್ಕೆ ಒಳ್ಳೆಯದಾಗಲಿದೆ ಎಂದು ತಿಳಿಸಿದರು.
ಅರಭಾವಿ ಕ್ಷೇತ್ರಕ್ಕೆ ಸೇರಿರುವ ಈರಣ್ಣಾ ಕಡಾಡಿ ಅವರು ಕಳೆದ ೩೦ ವರ್ಷಗಳಿಂದ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಪಕ್ಷವನ್ನು ಬೇರು ಮಟ್ಟದಿಂದ ಸಂಘಟಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.

ಪ್ರಬಲ ಅಭ್ಯರ್ಥಿಗಳ ಮಧ್ಯೆಯೂ ಸಾಮಾನ್ಯ ಕಾರ್ಯಕರ್ತರನ್ನು ಗುರುತಿಸಿ ರಾಜ್ಯಸಭೆಗೆ ಆಯ್ಕೆ ಮಾಡಿರುವುದು ಪಕ್ಷ ತನ್ನ ಹಳೆಯ ಕಾರ್ಯಕರ್ತರನ್ನು ಎಂದಿಗೂ ಕೈಬಿಡುವುದಿಲ್ಲ ಎಂಬುದಕ್ಕೆ ನಿದರ್ಶನವಾಗಿದೆ. ಮುಂದಿನ ದಿನಗಳಲ್ಲಿ ಈರಣ್ಣಾ ಕಡಾಡಿ ಅವರಿಗೆ ಉಜ್ವಲ ಭವಿಷ್ಯವಿದ್ದು, ರಾಜ್ಯ ಸಭೆಗೆ ಅವಿರೋಧವಾಗಿ ಆಯ್ಕೆಯಾಗಲಿರುವ ಕಡಾಡಿ ಅವರನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದಿಸಿದರು. ಕಡಾಡಿ ಅವರ ಪಕ್ಷ ನಿಷ್ಠೆಯನ್ನು ಗುರುತಿಸಿ ರಾಜ್ಯಸಭೆಗೆ ಅವಕಾಶ ನೀಡಿರುವುದಕ್ಕೆ ಬಿಜೆಪಿ ಕೇಂದ್ರ ಹಾಗೂ ರಾಜ್ಯ ನಾಯಕರಿಗೆ ಕಹಾಮ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕೃತಜ್ಞತೆ ಸಲ್ಲಿಸಿದರು.

Related