ಗಬ್ಬು ನಾರುತ್ತಿದೆ ಗುಬ್ಬಿ; ಅಧಿಕಾರಿಗಳ ಕಡೆಗಣನೆ

ಗಬ್ಬು ನಾರುತ್ತಿದೆ ಗುಬ್ಬಿ; ಅಧಿಕಾರಿಗಳ ಕಡೆಗಣನೆ

ಗುಬ್ಬಿ : ಪಟ್ಟಣದ ಎಲ್ಲೆಡೆ ಕಸದ ರಾಶಿ ಕಣ್ಣಿಗೆ ರಾಚುತ್ತಿದ್ದರೂ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.

10ನೇ ವಾರ್ಡ್ ಮಹಾಲಕ್ಷ್ಮಿ ನಗರದ 4ನೇ ತಿರುವು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಎದುರಿನ ಉದ್ಯಾನದ ಸುತ್ತ, 9ನೇ ವಾರ್ಡ್‍ನ ಮಾರುತಿ ನಗರ, ವಿದ್ಯಾನಗರದ ಸಾಲುಮರದ ತಿಮ್ಮಕ್ಕ ಉದ್ಯಾನದ ಸುತ್ತ, ಪಂಚಮುಖಿ ಆಂಜನೇಯಸ್ವಾಮಿ, ದೇವಸ್ಥಾನ ರಸ್ತೆ, ವಿನಾಯಕ ನಗರ ಮತ್ತು ಪೆÇಲೀಸ್ ವಸತಿನಿಲಯ ರಸ್ತೆ ಬದಿಯ ಚರಂಡಿಗಳು ಕಟ್ಟಿಕೊಂಡಿವೆ.

ವಿದ್ಯಾನಗರ ಹಾಗೂ ರೈಲ್ವೆ ನಿಲ್ದಾಣಕ್ಕೆ ತೆರಳುವ ರಸ್ತೆ ಬದಿಯ ಆಲದ ಮರದ ಕೆಳಗೆ, ಬಾಬು ಜಗಜೀವನರಾಂ ನಗರ, ಹಳೇ ಎ.ಕೆ.ಕಾಲೊನಿ, ಟಿಪ್ಪು ವೃತ್ತ, ಶಾದಿ ಮಹಲ್ ರಸ್ತೆಯಲ್ಲಿ ಕಸದ ರಾಶಿ ಜನರನ್ನು ಸ್ವಾಗತಿಸುತ್ತದೆ. ಪದವಿ ಕಾಲೇಜು ಪಕ್ಕದ ಒಳಚರಂಡಿ ದುರ್ವಾಸನೆ ಬೀರುತ್ತಿದೆ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಪಟ್ಟಣದ ಕೆಲ ನಿವಾಸಿಗಳು ಹಸಿಕಸ ಮತ್ತು ಒಣಕಸ ವಿಂಗಡಿಸುವ ಗೋಜಿಗೆ ಹೋಗದೆ ಸೀರೆ ಮತ್ತು ಉಡುಪಿನಿಂದ ಗಂಟು ಕಟ್ಟಿ ರಸ್ತೆ ಬದಿಗಳಲ್ಲಿ ಎಸೆಯುತ್ತಿರುವುದು ಕಸ ಹೆಚ್ಚಲು ಕಾರಣವಾಗಿದೆ ಎನ್ನುತ್ತಾರೆ ಸಾರ್ವಜನಿಕರು.

‘ಕಸದ ವಾಹನಗಳು ಕೆಲವು ವಾರ್ಡ್‍ಗಳಲ್ಲಿ ಮುಂಜಾನೆ ಬರುತ್ತದೆ. ಮತ್ತೆ ಕೆಲವೆಡೆ ಮಧ್ಯಾಹ್ನ ಬರುತ್ತವೆ. ಕೆಲಸಕ್ಕೆ ಹೋಗುವವರು ಮಧ್ಯಾಹ್ನ ಮನೆಯಲ್ಲಿ ಇರುವುದಿಲ್ಲ. ಹಾಗಾಗಿ ವಾಹನಕ್ಕೆ ಕಸ ಹಾಕಲು ಸಾಧ್ಯವಾಗುವುದಿಲ್ಲ. ಪ್ರತಿ ವಾರ್ಡ್‍ಗೂ ಪ್ರತ್ಯೇಕ ವಾಹನ ಮತ್ತು ನಿರ್ದಿಷ್ಟ ಸಮಯ ನಿಗದಿ ಮಾಡಬೇಕು’ ಎನ್ನುತ್ತಾರೆ ಮಾರುತಿ ನಗರದ ನಾಗಲಕ್ಷ್ಮಿ.

Related