ಬಿಬಿಎಂಪಿಯಲ್ಲಿ ಟ್ರಾನ್ಸ್ ಫರ್ ಸ್ಟೇಷನ್ ಕರ್ಮಕಾಂಡ!

ಬಿಬಿಎಂಪಿಯಲ್ಲಿ ಟ್ರಾನ್ಸ್ ಫರ್ ಸ್ಟೇಷನ್ ಕರ್ಮಕಾಂಡ!

ಬೆಂಗಳೂರು: ಬಿಬಿಎಂಪಿ ಅಧಿಕಾರಿಗಳ ಆಡಳಿತ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಾಣದ ನೆಪದಲ್ಲಿ ಸುಮಾರು 180ಕೋಟಿ ರು.ಗಳನ್ನು ಕಸದ ಗುಂಡಿಗೆ ಸುರಿಯಲು ಮುಂದಾಗಿದೆ.

ವಾರ್ಡ್ ಗಳಲ್ಲಿ ಕಸ ಸಂಗ್ರಹಿಸಿಕೊಂಡು ಹೊರವಲಯದ ಸಂಸ್ಕರಣಾ ಘಟಕಗಳಿಗೆ ಸಾಗಿಸುವ ಬದಲು ನಗರದ ಮೂರು ಪ್ರಮುಖ ಜಾಗಗಳಲ್ಲಿ ಕಸ ಸಂಗ್ರಹಿಸಿಕೊಂಡು ನಂತರ ಸಾಗಣೆ ಮಾಡಲು ಮುಂದಾಗಿದೆ. ಇದಕ್ಕಾಗಿ ಕೋಟ್ಯಂತರ ರೂ. ಬೆಲೆ ಬಾಳುವ ಮೂರು ಪ್ರಮುಖ ಜಾಗಗಳಲ್ಲಿ ಟ್ರಾನ್ಸ್ ಫರ್ ಸ್ಟೇಷನ್ ಹೆಸರಿನ ಕಸದ ಸಂಗ್ರಹ ತಾಣ ನಿರ್ಮಿಸಲು ಸದ್ದಿಲ್ಲದೆ ಟೆಂಡರ್ ಪ್ರಕ್ರಿಯೆವನ್ನೇ ಮುಗಿಸಿ ಬಿಟ್ಟಿದೆ.

ಅಂದರೆ ಸದ್ಯ ಇರುವ ವ್ಯವಸ್ಥೆಯಲ್ಲಿ ಮನೆಗಳಿಂದ ಕಸ ಸಂಗ್ರಹಿಸುವ ಆಟೋಗಳು ಕಸವನ್ನು ಕಾಂಪ್ಯಾಕ್ಟರ್ ಗಳಿಗೆ ಹಾಕುತ್ತವೆ. ನಂತರ ಕಾಂಪ್ಯಾಕರ್ ಗಳು ಬೆಂಗಳೂರಿನ ಹೊರ ವಲಯದಲ್ಲಿರುವ ಕಸ ಸಂಸ್ಕರಣಾ ಘಟಕಗಳಿಗೆ ಕೊಂಡೋಯ್ಯುತ್ತವೆ.  ಹೀಗಾಗಿ 10 ಟನ್ ಸಾಮರ್ಥ್ಯದ ಒಂದು ಕಾಂಪ್ಯಾಕ್ಟರ್ ಗೆ ಕಸ ಸಾಗಿಸಲು ತಿಂಗಳಿಗೆ 1.86 ಲಕ್ಷ ರೂ.  ಬಾಡಿಗೆ ಮಾತ್ರ ಪಾವತಿಸಬೇಕಾಗುತ್ತದೆ.  ಆದರೆ ಬಿಬಿಎಂಪಿ ಈಗ ನಿರ್ಧರಿಸಿರುವ ಹೊಸ ಕಸ ನಿರ್ವಹಣಾ ವ್ಯವಸ್ಥೆಯಲ್ಲಿ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸಿ ಹೆಚ್ಚುವರಿ 180ಕೋಟಿ ರೂ. ವೆಚ್ಚ ಮಾಡಲು ಸಾಕಷ್ಟು ತರಾತುರಿಯ ಕ್ರಮಕೈಗೊಳ್ಳುತ್ತಿದೆ.

ಅಷ್ಟಕ್ಕೂ ಇಂಥ ಟ್ರಾನ್ಸ್ ಫರ್ ಸ್ಟೇಷನ್ ಗಳು ಈಗಾಗಲೇ ಚಿಕ್ಕ ಪ್ರಮಾಣದಲ್ಲಿ ಅಸ್ತಿತ್ವದಲ್ಲಿದ್ದು, ಅವುಗಳಿಂದ ಕಸ ನಿರ್ವಹಣೆಗೆ ಹೇಳಿಕೊಳ್ಳುವ ಪ್ರಯೋಜನವೇನೂ ಆಗುತ್ತಿಲ್ಲ. ಇಂಥ ವೈಫಲ್ಯದ ನಡುವೆಯೂ ಬಿಬಿಎಂಪಿ ಆಡಳಿತ ಸರಕಾರದ ಪರೋಕ್ಷ ಬೆಂಬಲದೊಂದಿಗೆ 150 ಟನ್ ಸಾಮರ್ಥ್ಯದ ಮೂರು ಹೊಸ ಟ್ರಾನ್ಸ್ ಫರ್ ಸ್ಟೇಷನ್  ನಿರ್ಮಾಣ ಮಾಡುತ್ತಿದೆ. ಈ ಮೂಲಕ ಪಾಲಿಕೆಯ ಕೋಟ್ಯಂತ ರೂ. ಹಣ ಮತ್ತು ಕೋಟ್ಯಂತರ ರೂ. ಬೆಲೆ ಬಾಳುವ  ಜಾಗವನ್ನು ಖಾಸಗಿ ಸಂಸ್ಥೆಗೆ ನೀಡಲು ಕ್ರಮಕೈಗೊಂಡಿದೆ. ಪಾಲಿಕೆಯ ಹಣವನ್ನು ಅನಗತ್ಯವಾಗಿ ವೆಚ್ಚ ಮಾಡುವ ದೊಡ್ಡ ಹಗರಣ ಇದಾಗಿದ್ದು, ಇದರ ಹಿಂದೆ ಭಾರೀ ರಾಜಕೀಯ ಕೈಗಳೇ ಕೆಲಸ ಮಾಡುತ್ತಿರುವ ಶಂಕೆ ವ್ಯಕ್ತವಾಗುತ್ತಿವೆ.

ಏನಿದು ಹೊಸ ಸ್ಕ್ಯಾಮ್?

ಬೆಂಗಳೂರಿನಲ್ಲಿ ನಿತ್ಯ 4200 ಮೆ.ಟನ್ ಕಸ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ 3000 ಮೆ.ಟನ್ ಗಳಿಗೂ  ಅಧಿಕ ಕಸನ್ನು ನಗರದ ಮೂರು ಜಾಗಗಳಲ್ಲಿ ಸಂಗ್ರಹಿಸಿಕೊಂಡು ನಂತರ ಕಸ ಹಾಕುವ ಭೂಭರ್ತಿ (ಲ್ಯಾಂಡ್ ಫಿಲ್ ಸೈಟ್)  ತಾಣಗಳಿಗೆ ಸಾಗಿಸಲಾಗುತ್ತದೆ. ಆದರೆ ಬಿಬಿಎಂಪಿ ಆಡಳಿತ ಈಗ ಕೋರಮಂಗಲ, ಚಿಕ್ಕಪೇಟೆ ಹಾಗೂ ಹೂಡಿಯಲ್ಲಿ ತಲಾ ಒಂದೊಂದು ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಾಣಕ್ಕೆ ಅಸ್ತು ಎಂದಿದೆ. ಸಮಾರು 150 ಟನ್ ಸಾಮರ್ಥ್ಯದ ಒಂದು ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸಲು ಕನಿಷ್ಟ 22 ಕೋಟಿ ರೂ. ಬೇಕಾಗುತ್ತದೆ. ಅಂದರೆ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಾಣಕ್ಕೆ 13ಕೋಟಿಗಳಾದರೆ ಅದರ ನಿರ್ವಹಣೆಗೆ 9 ಕೋಟಿ ರೂ. ವೆಚ್ಚ ಮಾಡಲು ಬಿಬಿಎಂಪಿ ನಿರ್ಧರಿಸಿದೆ.  ಇದೇ ರೀತಿ ಬೆಂಗಳೂರಿನ ಮೂರು ಪ್ರಮುಖ ಸ್ಥಳಗಳಲ್ಲಿ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸಿ, ನಿರ್ವಹಣೆ ಮಾಡಲು ವರ್ಷಕ್ಕೆ ಕನಿಷ್ಠ 66 ಕೋಟಿ ರೂ. ವೆಚ್ಚವಾಗುತ್ತದೆ. ಇದಲ್ಲದೆ ಕೋರಮಂಗಳ, ಹೂಡಿ ಮತ್ತು ಚಿಕ್ಕಪೇಟೆ ವಾರ್ಡ್ ಗಳಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಸುಮಾರು ಎರಡೂವರೆ ಎಕರೆಗೂ ಹೆಚ್ಚಿನ ಜಾಗವನ್ನೂ ಖಾಸಗಿಗೆ ನೀಡಲಾಗುತ್ತಿದೆ. ಇದರಿಂದ ಬಿಬಿಎಂಪಿಗೆ ಬಾರೀ ನಷ್ಟ ಉಂಟಾಗುವ ಸಾಧ್ಯತೆ ಇದೆ. ಅಂದರೆ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಾಣದಿಂದ ಬಿಬಿಎಂಪಿಗೆ ವರ್ಷಕ್ಕೆ 66 ಕೋಟಿ ರೂ. ಹೆಚ್ಚವರಿ ಹೊರೆಯ ಜತೆಗೆ ನೂರಾರು ಕೋಟಿ ಬೆಲೆ ಬಾಳುವ ಜಾಗವನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಬಿಬಿಎಂಪಿಗೆ ಹೇಗೆ ನಷ್ಟ?

ಬಿಬಿಎಂಪಿ ಮೂರು ಜಾಗದಲ್ಲಿ 66 ಕೋಟಿ ರೂ. ವೆಚ್ಚ ಮಾಡಿ 150 ಟನ್ ಸಾಮರ್ಥ್ಯದ ಟ್ರಾನ್ಸ್ ಫರ್ ಸ್ಟೇಷನ್ ಗಳನ್ನು ನಿರ್ಮಿಸುವ ಬದಲು ಈಗ ಇರುವ ಮಾದರಿಯಲ್ಲೇ ಕಾಂಪ್ಯಾಕ್ಟರ್ ಗಳನ್ನು ಹೆಚ್ಚಿಸಬಹುದು. ಒಂದು ಕಾಂಪ್ಯಾಕ್ಟರ್ 10 ಟನ್ ಕಸ ಸಾಗಣೆ ಮಾಡುವ ಸಾಮರ್ಥವಿದೆ. ಇದಕ್ಕೆ ತಿಂಗಳಿಗೆ ಬರೀ 1.86 ಲಕ್ಷ ವೆಚ್ಚವಾಗುತ್ತದೆ. ಅದರಂತೆ 150 ಟನ್ ಟ್ರಾನ್ಸ್ ಫರ್ ಸ್ಟೇಷನ್ ಬದಲು 15 ಕಾಂಪ್ಯಾಕ್ಟರ್ ಗಳನ್ನು ನಿಯೋಜಿಸಿದರೆ, ತಿಂಗಳಿಗೆ 28 ಲಕ್ಷ ಮಾತ್ರ ವೆಚ್ಚವಾಗುತ್ತದೆ. ವರ್ಷಕ್ಕೆ 3.35 ಕೋಟಿಗಳಲ್ಲಿ ಕಸ ಸಾಗಣೆಯಾಗುತ್ತದೆ. ಅಂದರೆ ವರ್ಷಕ್ಕೆ 22 ಕೋಟಿ ರೂ. ವೆಚ್ಚ ಮಾಡಿ ಒಂದು ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸಿ ಮಾಡುವ ಕೆಲಸವನ್ನು ಕಾಂಪ್ಯಾಕ್ಟರ್ ಗಳ ಮೂಲಕ ಕೇವಲ 3.35 ಕೋಟಿ ವೆಚ್ಚದಲ್ಲೇ ಮುಗಿಸಬಹುದು.

ಆದರೆ ಬಿಬಿಎಂಪಿ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸುವ ಲಾಬಿಗೆ ಜೋತು ಬಿದ್ದಿದ್ದು, ಒಂದು ಟ್ರಾನ್ಸ್ ಫರ್ ಸ್ಟೇಷನ್ ನಿರ್ವಹಣೆಯಲ್ಲೇ 6 ಕೋಟಿಗಳನ್ನು (ನಿರ್ಮಾಣ ವೆಚ್ಚ 13ಕೋಟಿ ರೂ. ಹೊರತುಪಡಿಸಿ) ವೆಚ್ಚ ಮಾಡಿ ನಷ್ಟಕ್ಕೆ ಗುರಿಯಾಗುತ್ತಿದೆ. ಇದೇರೀತಿ ನಗರದಲ್ಲಿ ಮೂರು ಟ್ರಾನ್ಸ್ ಫರ್ ಸ್ಟೇಷನ್ ನಿರ್ವಹಣೆಯಿಂದ ಸುಮಾರು 18ಕೋಟಿ ರು.ಗಳಿಗೂ ನಷ್ಟಕ್ಕೆ ಗುರಿಯಾಗಲಿದೆ. ಈ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸಿ, ನಿರ್ವಹಣೆ ಮಾಡುವ 7 ವರ್ಷಗಳ ಗುತ್ತಿಗೆಯನ್ನು

ಖಾಸಗಿ ಸಂಸ್ಥೆಯೊಂದಕ್ಕೆ ನೀಡಲಾಗಿದ್ದು, ಇದರಿಂದ 7 ವರ್ಷಗಳ ಅವಧಿಗೆ ಬರೀ ಕಸ ನಿರ್ವಹಣೆ ಒಂದೇ ವಿಚಾರದಲ್ಲಿ ಬಿಬಿಎಂಪಿ 140 ಕೋಟಿಗಳ ನಷ್ಟ ಅನುಭವಿಸಬೇಕಾಗುತ್ತದೆ. ಜತೆಗೆ 3 ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಾಣ ವೆಚ್ಚ 39 ಕೋಟಿ ರು.ಗಳೂ ಸೇರಿದರೆ, 179ಕೋಟಿ ರು. ನಷ್ಟದಿಂದ ನರಳುವ ಸಾಧ್ಯತೆ ಎಂದು ಅಧಿಕಾರಿಗಳೇ ಹೇಳಿದ್ದಾರೆ. 

ಈಗ ಇರುವ ಸ್ಟೇಷನ್ ಏನಾಯ್ತು?

ಬಿಬಿಎಂಪಿ 5 ವರ್ಷಗಳ ಹಿಂದೆಯೇ ಟ್ರಾನ್ಸ್ ಫರ್ ಸ್ಟೇಷನ್ ಆರಂಬಿಸಲು ಹೋಗಿ ಕೈ ಸುಟ್ಟಿಕೊಂಡಿದೆ. ಅಂದರೆ ನಗರದ 50ಕ್ಕೂ ಹೆಚ್ಚು ಕಡೆ ಮಿನಿ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸಲು ಟಿಪಿಎಸ್ ಎಂಬ ಖಾಸಗಿ ಸಂಸ್ಥೆಗೆ ಬಿಬಿಎಂಪಿ ಗುತ್ತಿಗೆ ನೀಡಿತ್ತು. ಆದರೆ ಆ ಸಂಸ್ಥೆ ಈತನಕ ಸಂಜಯ್ ನಗರ, ದೊಮ್ಮಲೂರು ಹಾಗೂ ಚಿಕ್ಕಪೇಟೆ ಸೇರಿದಂತೆ ಬರೀ 5 ಕಡೆ ಮಾತ್ರ ಮಿನಿ ಟ್ರಾನ್ಸ್ ಫರ್ ಸ್ಟೇಷನ್ ಗಳನ್ನು ಆರಂಭಿಸಲಾಗುತ್ತಿದ್ದು, ಇದರಿಂದ ಕಸ ನಿರ್ವಹಣೆ ಯಾವುದೇ ರೀತಿಯಲ್ಲೂ ಸಹಕಾರಿಯಾಗುತ್ತಿಲ್ಲ. ಬದಲಾಗಿ ಎಲ್ಲವನ್ನೂ ಕಾಂಪ್ಯಾಕ್ಟರ್ ಗಳ ಮೂಲಕವೇ ನಿರ್ವಹಣೆ ಮಾಡಲಾಗುತ್ತಿದೆ. ಇಂಥ ದೊಡ್ಡ ವೈಫಲ್ಯ ಬಿಬಿಎಂಪಿ ಮುಂದಿರುವಾಗಲೇ 150 ಟನ್ ಸಾಮರ್ಥ್ಯದ ಟ್ರಾನ್ಸ್ ಫರ್ ಸ್ಟೇಷನ್ ನಿರ್ಮಿಸಿ ಇರುವ ಹಣ ಮತ್ತು ಜಾಗ ಎರಡನ್ನೂ ಕಳೆದುಕೊಳ್ಳಲು ಬಿಬಿಎಂಪಿ ನಿರ್ಧಾರ ಮಾಡಿದೆ.

ಯೋಜನೆಯ ನಷ್ಟಗಳೇನು?

1 ಬಿಬಿಎಂಪಿಗೆ ಒಟ್ಟು 179ಕೋಟಿ ರು. ನಷ್ಟ.

2 ಸುಮಾರು 300ಕೋಟಿ ರು. ಬೆಲೆ ಬಾಳುವ ಪ್ರಮುಖ ಜಾಗಗಳು ಕೈ ತಪ್ಪಲಿವೆ.

3 ಉದ್ದೇಶಿತ ಯೋಜನಾ ಜಾಗದಲ್ಲಿರುವ ನಿವಾಸಿಗಳನ್ನು ಒಕ್ಕಲೆಬ್ಬಿಸಬೇಕಾಗುತ್ತದೆ.

4 150 ಟನ್ ಟ್ರಾನ್ಸ್ ಫರ್ ಸ್ಟೇಷನ್ ಆರಂಭಿಸಿದರೆ ಆಲ್ಲಿ ಸುಮಾರು 150 ಆಟೋಗಳು    ನಿಲ್ಲಬೇಕಾಗುತ್ತದೆ.

5 ಆಟೋ ಗಳು ಪಕ್ಕದಲ್ಲೇ ಇರುವ ಕಾಂಪ್ಯಾಕ್ಟರ್ ಬಿಟ್ಟು 7 ಕಿ.ಮೀ.ಗಳಿಂದಲೂ ಕಸ ಹೊತ್ತು ತರಬೇಕಾಗುತ್ತದೆ.

6  ಇದರಿಂದ ನಿತ್ಯ ಕಸ ಹಾಕುವ ತಾಣದಲ್ಲಿ ದುರ್ವಾಸನೆ ಮತ್ತು ಟ್ರಾಫಿಕ್ ಸಮಸ್ಯೆ ತಲೆದೋರಲಿದೆ.

ಪರಿಹಾರಗಳೇನು?

ಟ್ರಾನ್ಸ್ ಫರ್ ಸ್ಟೇಷನ್  ಬದಲು ಇರುವ ವ್ಯವಸ್ಥೆ ಮುಂದುವರಿಸಬಹುದು.

ಕಾಂಪ್ಯಾಕ್ಟರ್ ಗಳ ಮೂಲಕವೇ ವಾರ್ಡ್ ಗಳಿಗೇ ಹೋಗಿ ಕಸ ಸಂಗ್ರಹಿಸಬಹುದು.

ಯೋಜನೆ ಕೈ ಬಿಟ್ಟರೆ 300ಕೋಟಿ ಜಾಗ ರಕ್ಷಣೆಯಾಗುತ್ತದೆ.

ಉದ್ದೇಶಿತ ಜಾಗದಲ್ಲಿ ಬಿಬಿಎಂಪಿ ವಾಣಿಜ್ಯ ಅಥವಾ ಪಾರ್ಕಿಂಗ್ ಕಟ್ಟಡ ನಿರ್ಮಿಸಿ ಆದಾಯ ಗಳಿಸಬಹುದು

ಉದ್ದೇಶಿತ ಜಾಗದಲ್ಲಿ ನಿವಾಸಿಗಳನ್ನು ಒಕ್ಕಲೆಬ್ಬಿಸುವುದನ್ನು ತಡೆಯಬಹುದು.

Related