ಪುಟ್ಟ ಕಂದಮ್ಮನಿಗೂ ಬಿಡದ ಕೊರೋನಾ

ಪುಟ್ಟ ಕಂದಮ್ಮನಿಗೂ ಬಿಡದ ಕೊರೋನಾ

ಲಂಡನ್, ಮಾ.16 : ಇಡೀ ವಿಶ್ವದಲ್ಲಿ ಕೊರೋನಾ ಭೀತಿ ಆವರಿಸಿರೋ ಬೆನ್ನಲ್ಲೇ ಲಂಡನ್ನಲ್ಲಿ ಆಗತಾನೆ ಹುಟ್ಟಿದ ಮಗುವಿನಲ್ಲೂ ಕೊರೋನಾ ಸೋಂಕು ದೃಢಪಟ್ಟಿದೆ. ಇದು ಜಗತ್ತಿನಲ್ಲಿ ಪತ್ತೆಯಾದ ಅತಿ ಕಿರಿಯ ಪ್ರಕರಣವಾಗಿದೆ.
ಕೆಲ ದಿನಗಳ ಹಿಂದೆಯಷ್ಟೇ ನ್ಯುಮೋನಿಯಾ ಲಕ್ಷಣಗಳು ಕಾಣಿಸಿಕೊಂಡಿದ್ದ ಗರ್ಭಿಣಿಯನ್ನು ಲಂಡನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಆಕೆಯ ರಕ್ತದ ಮಾದರಿಯನ್ನ ಪರೀಕ್ಷೆಗೆ ಕಳಿಸಲಾಗಿತ್ತು. ಮಗು ಜನನಕ್ಕೂ ಮೊದಲು ಕಳಿಸಿದ್ದ ರಕ್ತದ ಮಾದರಿಯ ವರದಿ ಮಗು ಹುಟ್ಟಿದ ನಂತರ ಬಂದಿದ್ದು, ಮಹಿಳೆಗೆ ಕೊರೋನಾ ಇದ್ದಿದ್ದು ದೃಢಪಟ್ಟಿದೆ. ಬಳಿಕ ಮಗುವನ್ನ ಪರೀಕ್ಷೆಗೆ ಒಳಪಡಿಸಿದಾಗ ಮಗುವಿಗೂ ಸೋಂಕು ತಗುಲಿರುವುದು ದೃಢಪಟ್ಟಿದೆ.
ಆದರೆ ಗರ್ಭದಲ್ಲೇ ಮಗುವಿಗೆ ಸೋಂಕು ತಗುಲಿತಾ ಅಥವಾ ಜನನವಾಗುವಾಗ ತಗುಲಿತಾ ಅನ್ನೋದು ಇನ್ನೂ ತಿಳಿದುಬಂದಿಲ್ಲ. ಮಗುವಿಗೆ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗ್ತಿದ್ದು, ತಾಯಿಯನ್ನ ಬೇರೆಕಡೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಮಹಿಳೆಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ಸಿಬ್ಬಂದಿ ಮೇಲೆ ತೀವ್ರ ನಿಗಾ ಇಡಲಾಗಿದೆ.

Related