ರಾಜ್ಯವನ್ನು ಅಕ್ರಮ ವಲಸಿಗರ ನೆಲೆಯಾಗಲು ಬಿಡುವುದಿಲ್ಲ

ರಾಜ್ಯವನ್ನು ಅಕ್ರಮ ವಲಸಿಗರ ನೆಲೆಯಾಗಲು ಬಿಡುವುದಿಲ್ಲ

ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ನೆಲಸಿರುವ ವಿದೇಶಿಯರನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ರಾಜ್ಯ ಪೊಲೀಸರಿಗೆ ಸ್ಪಷ್ಟ ನಿರ್ದೇಶನ ನೀಡಲಾಗಿದೆ, ಇದಕ್ಕಾಗಿ ವಿಶೇಷ ಕಾರ್ಯಾಚರಣೆ ನಡೆಸಲು ಸೂಚಿಸಲಾಗಿದೆ ಎಂದು ಕರ್ನಾಟಕ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಗುರುವಾರ ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.
ಸಚಿವರು ಸದನದಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಭಾರತೀಯ ಜನತಾ ಪಕ್ಷದ ಪಿ.ಎಂ ಮುನಿರಾಜು ಗೌಡ ರವರು ಪ್ರಶ್ನೆಗೆ ಉತ್ತರಿಸುತ್ತಾ ರಾಜ್ಯದಲ್ಲಿ ಅನಧಿಕೃತವಾಗಿ, ಅಕ್ರಮವಾಗಿ ನೆಲಸಿರುವ ವಿದೇಶಿ ಪ್ರಜೆಗಳನ್ನು ಗುರುತಿಸಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. ಅಕ್ರಮವಾಗಿ ನೆಲಸಿರುವ ವಿದೇಶಿಗರಿಗೆ ಆಧಾರ್ ಕಾರ್ಡ್, ಗುರಿತಿನ ಚೀಟಿಯನ್ನು ಮಾಡಿಕೊಟ್ಟ ಒಂದು ಪ್ರಕರಣವು ಬೆಂಗಳೂರು ನಗರದಲ್ಲಿ ವರದಿಯಾಗಿದ್ದು, ಒಬ್ಬ ವೈದ್ಯಾಧಿಕಾರಿಯನ್ನು ಅಮಾನತಿನಲ್ಲಿಡಲಾಗಿದೆ, ಕಾನೂನು ಕ್ರಮಗಳನ್ನು ಜರುಗಿಸಲಾಗುತ್ತಿದೆ ಎಂದು ತಿಳಿಸಿದರು.
ಅಕ್ರಮ ವಲಸಿಗರ ವಿರುದ್ಧ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಲಾಗಿದ್ದು “ಕರ್ನಾಟಕ ರಾಜ್ಯ ಅಕ್ರಮ ವಲಸಿಗರ ನೆಲೆಯಾಗಲು ಬಿಡುವುದಿಲ್ಲ” ಎಂದು ಘೋಷಿಸಿದರು. ಸದಸ್ಯರ ಇನ್ನೊಂದು ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಅಕ್ರಮವಾಗಿ ಯಾವುದೇ ಬಾಂಗ್ಲಾದೇಶಿ ನಾಗರಿಕರು ಅಥವಾ ರೋಹಿಂಗ್ಯಾ ಮುಸ್ಲಿಮರು, ಮಸೀದಿ ಅಥವಾ ಮದರಸಾಗಳಲ್ಲಿ ವಾಸವಾಗಿರುವ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೆ ಅಕ್ರಮ ವಲಸಿಗರು ಆಶ್ರಯ ಪಡೆದಿರುವುದನ್ನು ನಿಯಂತ್ರಿಸಲು ಎಲ್ಲಾ ನಗರ, ಜಿಲ್ಲಾ ಮಟ್ಟದಲ್ಲಿ “ಸ್ಪೆಷಲ್ ಟಾಸ್ಕ್ ಫೋರ್ಸ್” ರಚಿಸಿದ್ದು, ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಸ್ಥಳೀಯ ಪೊಲೀಸರು, ಸ್ಪೆಷಲ್ ಟಾಸ್ಕ್ ಫೋರ್ಸ್ ಸಿಬ್ಬಂದಿಯವರು ನಿರಂತರವಾಗಿ ಕಾರ್ಯಪ್ರವೃತ್ತರಾಗಿರುತ್ತಾರೆ ಎಂದು ತಿಳಿಸಿದರು.

Related