ಸಚಿವರ ಕಾರ್ಯಕ್ರಮದಲ್ಲೇ ಜನಜಾತ್ರೆ

 ಸಚಿವರ ಕಾರ್ಯಕ್ರಮದಲ್ಲೇ ಜನಜಾತ್ರೆ

ಚಿಕ್ಕಬಳ್ಳಾಪುರ: ತಾಲೂಕಿನ ನಂದಿ ಗ್ರಾಮದಲ್ಲಿ ಆರೋಗ್ಯ ಸಚಿವರು ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲೇ ಕೋವಿಡ್ ಮಾರ್ಗಸೂಚಿ ಉಲ್ಲಂಘಣೆ ಮಾಡಿದ್ದು ಕಂಡು ಬಂತು. ರಾಜ್ಯದಲ್ಲಿ ಕೋವಿಡ್ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವ ಹಿನ್ನೆಲೆ ಸರ್ಕಾರ ಇತ್ತೀಚಿಗೆ ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ಹೆಚ್ಚು ಜನ ಸೇರುವ ಧಾರ್ಮಿಕ ಕಾರ್ಯಕ್ರಮಗಳು, ಪ್ರತಿಭಟನೆ ಇತ್ಯಾದಿ ನಡೆಸದಂತೆ ಸೂಚಿಸಿದೆ. ಆದರೆ, ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿ ಆರೋಗ್ಯ ಸಚಿವರು ಪಾಲ್ಗೊಂಡಿದ್ದ ರಸ್ತೆ ಕಾಮಗಾರಿ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಜನ ಜಂಗುಳಿ ಸೇರುವ ಮೂಲಕ ನಿಯಮಗಳನ್ನು ಗಾಳಿಗೆ ತೂರಲಾಗಿತ್ತು.

ಭೂಮಿ ಪೂಜೆ ಬಳಿಕ ಮಾತನಾಡಿದ ಸಚಿವ ಸುಧಾಕರ್, ತಾಲೂಕಿನಾದ್ಯಂತ 28 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆಯಲಿರುವ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಲಾಗಿದೆ. ಎಲ್ಲಿಯೂ ಸಾಮೂಹಿಕ ಸಭೆಗಳನ್ನು ಮಾಡಬೇಡಿ ಎಂದು ಹೇಳಿದ್ದೇನೆ. ಆರೋಗ್ಯ ಸಚಿವನಾಗಿ ನಾನೇ ನಿಯಮಗಳನ್ನು ಮೀರಿದರೆ ಹೇಗೆ? ಇದರಿಂದ ಟೀಕೆಗಳಿಗೆ ಗುರಿಯಾಗುತ್ತೇನೆ.

ನಮ್ಮ ಜಿಲ್ಲೆಯ ಜನರಿಗೆ ಕೋವಿಡ್ ಬಂದರೆ ನಾನೇ ನೇರ ಹೊಣೆಯಾಗುತ್ತೇನೆ. ನಿಯಮಗಳನ್ನು ಕೊಡುವಂತ ಜನ ನಾವು ಮೊದಲು ಪಾಲನೆ ಮಾಡಬೇಕು. ಸರ್ಕಾರ ಜಾರಿಗೆ ತಂದಿರುವ ನಿಯಮಗಳು ಯಾವ ಕ್ಷೇತ್ರದ ವಿರುದ್ದವೂ ಅಲ್ಲ. ನಿರಂತರ ಒಂದು ತಿಂಗಳಿಂದ ನಾನು ಮನವಿ ಮಾಡುತ್ತಿದ್ದೇನೆ. ಬಹಳ ಜನ ನನ್ನ ಮನವಿಗೆ ಮಹತ್ವ ಕೊಟ್ಟಿಲ್ಲ. ಪ್ರಧಾನಿ ಮೋದಿಯವರ ಇಚ್ಛಾಶಕ್ತಿಯಿಂದ ಲಸಿಕೆ ಸಿಕ್ಕಿದೆ. ಆದರೆ, ಲಸಿಕೆ ತೆಗೆದುಕೊಳ್ಳುವಲ್ಲಿಯೂ ಜನರು ಆಸಕ್ತಿ ತೋರುತ್ತಿಲ್ಲ ಎಂದು ಹೇಳಿದರು.

Related