ದೇಗುಲ – ಬಯಲುಗಳೇ ಶಾಲೆ

  • In State
  • August 2, 2020
  • 1478 Views
ದೇಗುಲ – ಬಯಲುಗಳೇ ಶಾಲೆ

ತುಮಕೂರು : ಕೊರೋನಾ ವೈರಸ್ ಸೋಂಕಿನ ಪರಿಣಾಮವಾಗಿ ರಾಜ್ಯದಲ್ಲಿ ಶಾಲೆ-ಕಾಲೇಜುಗಳು ಮುಚ್ಚಿವೆ. ನಗರ ಪ್ರದೇಶಗಳಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಆನ್‌ಲೈನ್ ಕ್ಲಾಸ್, ಟ್ಯೂಷನ್ ಆರಂಭವಾಗಿದೆ. ಇವುಗಳ ನಡುವೆ ಗ್ರಾಮೀಣ ಪ್ರದೇಶದ ಬಡ ಕೂಲಿ ಕಾರ್ಮಿಕರ ಹಾಗೂ ರೈತರ ಮಕ್ಕಳು ತಮ್ಮ ಶಿಕ್ಷಣದ ಬಗ್ಗೆ ಚಿಂತೆಗೆ ಒಳಗಾಗಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ನಡುವೆ ತುಮಕೂರು ತಾಲೂಕು ಬೆಳ್ಳಾವಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರು, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ದೇಗುಲ ಆವರಣದಲ್ಲೇ ಪಾಠ ಪ್ರವಚನ ಶುರು ಮಾಡಿ, ಮಕ್ಕಳ ಕಲಿಕೆಗೆ ನೆರವಾಗುತ್ತಿದ್ದಾರೆ. ಬೇರೆ ಶಾಲೆಗಳಿಗೆ ಇದೊಂದು ಮಾದರಿ ಪ್ರಯೋಗವಾಗಿದೆ. ಶಿಕ್ಷಕರ ಮಾರ್ಗದರ್ಶನದಂತೆ ಬೆಳ್ಳಾವಿ ಪ್ರೌಢಶಾಲೆ ವಿದ್ಯಾರ್ಥಿಗಳು ಯಾವ ಕೊರೋನಾಕ್ಕೂ ಅಂಜದೆ, ಧೈರ್ಯದಿಂದ ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ.
ಬಯಲೇ ತರಗತಿ
ಬೆಳ್ಳಾವಿ ಶಾಲೆ ಶಿಕ್ಷಕರು ತಮ್ಮ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದೆ ಬೀಳಬಾರದು ಎಂಬ ಕಾರಣಕ್ಕಾಗಿ ಗ್ರಾಮದ ಸೋಮೇಶ್ವರ ಸ್ವಾಮಿ ದೇವಾಲಯ ಆವರಣದಲ್ಲಿ ತರಗತಿ ಆರಂಭಿಸಿದ್ದಾರೆ. ವಿದ್ಯಾರ್ಥಿಗಳನ್ನು ಅಂತರದಲ್ಲಿ ಕೂರಿಸಿ, ಅಗತ್ಯ ಮುಂಜಾಗ್ರತಾ ಕ್ರಮಗಳೊಂದಿಗೆ ಪಾಠ ಆರಂಭಿಸಿದ್ದಾರೆ. ಸುತ್ತಮುತ್ತಲಿನ ಎಂಟತ್ತು ಗ್ರಾಮಗಳ ವಿದ್ಯಾರ್ಥಿಗಳು ಈ ಬಯಲು ಶಾಲೆಗೆ ಹಾಜರಾಗುತ್ತಿದ್ದಾರೆ. ತರಗತಿ ಆರಂಭವಾಗಿ ಮೂರು ದಿನಗಳಾಗಿದ್ದು, ೧೨೦ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ.
ಚಂದನ ಪಾಠಕ್ಕೂ ಹಾಜರಿ
ಬೆಳಗ್ಗೆ ೯ ರಿಂದ ೧೧.೩೦ರವರೆಗೆ ಈ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಚಂದನ ವಾಹಿನಿಯಲ್ಲಿ ನಡೆಯುವ ತರಗತಿಗೆ ಹಾಜರಾಗುತ್ತಿದ್ದಾರೆ. ಬಳಿಕ ೧೧.೪೫ರಿಂದ ಮಧ್ಯಾಹ್ನ ೨ ಗಂಟೆವರೆಗೆ ಶಿಕ್ಷಕರು ನಡೆಸುತ್ತಿರುವ ಬಯಲು ಶಾಲೆಗೆ ಹಾಜರಾಗುತ್ತಿದ್ದಾರೆ. ಈ ತರಗತಿ ಮುಗಿಸಿಕೊಂಡು ಪುನಃ ಮಧ್ಯಾಹ್ನ ೩ಕ್ಕೆ ಚಂದನ ವಾಹಿನಿಯ ತರಗತಿಗೆ ಹಾಜರಾಗುತ್ತಿದ್ದಾರೆ. ಗ್ರಾಮೀಣ ಮಕ್ಕಳ ಈ ಉತ್ಸಾಹ ಶಿಕ್ಷಕರಿಗೆ ಮತ್ತಷ್ಟು ಪ್ರೇರಣೆಯಾಗಿದೆ.
ತಲೆದೂಗಿದ ಅಧಿಕಾರಿಗಳು
ರಾಜ್ಯಕ್ಕೆ ಮಾದರಿಯಾಗುವಂತೆ ಬದ್ಧತೆ ಪ್ರದರ್ಶಿಸಿದ ಬೆಳ್ಳಾವಿ ಸರಕಾರಿ ಪ್ರೌಢಶಾಲೆ ಶಿಕ್ಷಕರ ಕಾರ್ಯಕ್ಕೆ ಜಿಲ್ಲೆಯ ಇಲಾಖೆ ಅಧಿಕಾರಿಗಳು ತಲೆದೂಗಿದ್ದಾರೆ. ಡಿಡಿಪಿಐ ಸಿ.ನಂಜಯ್ಯ ಹಾಗೂ ಡಿವೈಪಿಸಿ ರಂಗಧಾಮಪ್ಪ ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ ಬಯಲು ಶಾಲೆಯ ಮಕ್ಕಳಿಗೆ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಶುಭ ಹಾರೈಸಿದ್ದಾರೆ.
ಪ್ರೇರಣೆಯಾದ ಶಿಕ್ಷಕ

ಬೆಳ್ಳಾವಿ ಕರ್ನಾಟಕ ಪಬ್ಲಿಕ್ ಶಾಲೆಯ ಸಹ ಶಿಕ್ಷಕ ಎಚ್. ಸದಾಶಿವಪ್ಪ, ಏಪ್ರಿಲ್‌ನಿಂದಲೇ ್ಸ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ಹೋಗಿ ಪಾಠ ಮಾಡುತ್ತಿದ್ದಾರೆ. ಇತ್ತೀಚೆಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಎದುರು ನೋಡುತ್ತಿದ್ದಾರೆ. ಅಷ್ಟರಲ್ಲಾಗಲೇ ಅವರು ಪ್ರಸಕ್ತ ಸಾಲಿನಲ್ಲಿ ಒಂಬತ್ತರಿAದ ಹತ್ತನೇ ತರಗತಿಗೆ ಬಂದಿರುವ ವಿದ್ಯಾರ್ಥಿಗಳಿಗೆ ಪಾಠ ಆರಂಭಿಸಿದ್ದಾರೆ.
ಪ್ರತಿನಿತ್ಯ ವಿದ್ಯಾರ್ಥಿಗಳ ಮನೆ ಬಾಗಿಲಿಗೆ ತೆರಳಿ ಪಾಠ ಮಾಡಿ, ಹೋಂ ವರ್ಕ್ ನೀಡಿ ಬರುತ್ತಿದ್ದರು. ಇದನ್ನು ಗಮನಿಸಿದ ಇತರೆ ಶಿಕ್ಷಕರಾದ ರವಿಕುಮಾರ್, ಜಯಣ್ಣ ಮತ್ತಿತರರು ಕೈಜೋಡಿಸಿದ್ದು, ಎಲ್ಲರೂ ಸೇರಿ ಗ್ರಾಮದ ದೇವಾಲಯ ಆವರಣದಲ್ಲಿ ತರಗತಿ ಆರಂಭಿಸಿದ್ದಾರೆ. ಇದಲ್ಲದೆ, ಎಚ್.ಸದಾಶಿವಪ್ಪ ವಾಟ್ಸಾಪ್ ಗ್ರೂಪ್‌ನಲ್ಲಿ ವಿದ್ಯಾರ್ಥಿಗಳಿಗೆ ನಿತ್ಯವೂ ಪ್ರಶ್ನೋತ್ತರಗಳನ್ನು ನೀಡಿ ತಮ್ಮ ಮೇಲಾಧಿಕಾರಿಗಳಿಗೆ ಅಪ್ ಡೇಟ್ ಮಾಡುತ್ತಿದ್ದಾರೆ.

Related