ಮರಳು ದಂಧೆ ತಡೆಗೆ ಕ್ರಮ ಕೈಗೊಳ್ಳಿ

ಮರಳು ದಂಧೆ ತಡೆಗೆ ಕ್ರಮ ಕೈಗೊಳ್ಳಿ

ಚಿತ್ತಾಪುರ : ಅನಧಿಕೃತ ಮತ್ತು ಅಪರಾಧ ಚಟುವಟಿಕೆ ತಡೆಯಬೇಕಾದ ಪೊಲೀಸರು ದಕ್ಷತೆಯಿಂದ ಕೆಲಸ ಮಾಡಬೇಕು. ರಕ್ಷಕರೆ ಭಕ್ಷಕರಾಗಬಾರದು. ಸಾಮಾಜಿಕ ಕಳಕಳಿಯಿಂದ ಕೆಲಸ ಮಾಡಬೇಕು ಎಂದು ಶಾಸಕ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಒಂದೂವರೆ ವರ್ಷದಿಂದ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿದೆ. ಇಷ್ಟೊಂದು ನಿರ್ಭಯವಾಗಿ ನಡೆಯುತ್ತಿರುವ ಮರಳು ದಂಧೆ ನಿಮಗೆ ಕಾಣಿಸುವುದಿಲ್ಲವೇ..? ಅದಕ್ಕೆ ಕಡಿವಾಣ ಏಕೆ ಹಾಕುತ್ತಿಲ್ಲ ಎಂದು ಪೊಲೀಸರ ವಿರುದ್ಧ ತೀವ್ರವಾಗಿ ಹರಿಹಾಯ್ದರು.

ಮರಳು ಅನಧಿಕೃತ ಸಾಗಣೆ ಕುರಿತು ಬಹಳ ಕಡಿಮೆ ಪ್ರಕರಣ ದಾಖಲಿಸಿದ್ದೀರಿ. ಅಕ್ರಮ ದಂಧೆ ತಡೆಯಲು ನಿಮಗೇನಾದರೂ ತೊಂದರೆಯಿದೆಯಾ..? ಎಂದು ಪ್ರಶ್ನಿಸಿದ ಅವರು, ನನ್ನ ಕ್ಷೇತ್ರದಲ್ಲಿ ಇನ್ಮುಂದೆ ಮರಳು ದಂಧೆ ನಡೆಯುವಂತ್ತಿಲ್ಲ ಎಂದು ಎಚ್ಚರಿಸಿದರು.

ಐಪಿಲ್ ಬೆಟ್ಟಿಂಗ್ ನಡೆಯುತ್ತಿದೆ. ಜೂಜಾಟದ ಕ್ಲಬ್ ಶುರುವಾಗಿವೆ. ಮಟಕಾ ದಂಧೆ ರಾಜಾರೋಷ ನಡೆಯುತ್ತಿದೆ. ಗಾಂಜಾ ಪತ್ತೆಯಾಗುತ್ತಿದೆ. ಎಲ್ಲಾ ಅಕ್ರಮ ಮತ್ತು ಅಪರಾಧ ಚಟುವಟಿಕೆಗೆ ಕಡಿವಾಣ ಹಾಕಬೇಕು. ಕಡೆಗಣಿಸಿದರೆ ಶಿಸ್ತಿನ ಕ್ರಮ ಅನಿವಾರ್ಯ ಎಂದು ತಾಕೀತು ಮಾಡಿದರು.

ಪೊಲೀಸ್ ಠಾಣೆಯಲ್ಲಿ ರಾಜಕೀಯ ಇಷ್ಟೊಂದು ರೀತಿ ಮೊದಲು ನಡೆದಿರಲಿಲ್ಲ. ವಿರೋಧ ಪಕ್ಷದವರು ಠಾಣೆಗೆ ಬಂದು ಅಧಿಕಾರಿಗಳ ಜೊತೆ ಕುಳಿತು ಎಫ್.ಐ.ಆರ್ ದಾಖಲಿಸುವುದು ನಡೆಯುತ್ತಿದೆ. ಪೊಲೀಸ್ ಆಡಳಿತದ ಮೇಲೆ ಅಧಿಕಾರಿಗಳ ಹಿಡಿತವಿಲ್ಲವಾಗಿದೆ. ರಾಜಕೀಯಕ್ಕೆ ಅವಕಾಶ ನೀಡಬೇಡಿ. ರೌಡಿ ಶೀಟರ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ. ಧರ್ಮ, ಸಂಘಟನೆ ಹೆಸರಲ್ಲಿ ಮೆರೆದಾಡಲು ಬಿಡಬೇಡಿ ಎಂದು ಸಿಪಿಐ ಕೃಷ್ಣಪ್ಪ ಅವರ ವಿರುದ್ಧ ಪ್ರಿಯಾಂಕ್ ವಾಗ್ದಾಳಿ ಮಾಡಿದರು.

ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ಪಾಟೀಲ್, ತಹಶೀಲ್ದಾರ್ ಉಮಾಕಾಂತ ಹಳ್ಳೆ, ಸಿಡಿಪಿಒ ರಾಜಕುಮಾರ ರಾಠೋಡ್, ಪಿ.ಆರ್.ಇ ಎಇಇ ಶ್ರೀಧರ್, ಕುಡಿಯುವ ನೀರು ಸರಬರಾಜು ಇಲಾಖೆಯ ಎಇಇ ಗಂಗಾಧರ್, ಪಿಎಸ್‌ಐ ಮಂಜುನಾಥರೆಡ್ಡಿ ಅವರು ತಮ್ಮ ಇಲಾಖೆಯ ಪ್ರಗತಿ ಮಾಹಿತಿ ನೀಡಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷ ಜಗದೇವರೆಡ್ಡಿ ಪಾಟೀಲ್, ಉಪಾಧ್ಯಕ್ಷ ಹರಿನಾಥ ಚವಾಣ್, ಜಿ.ಪಂ ಶಿವರುದ್ರ ಭೀಣಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಾ ಇದ್ದರು.

Related