ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ

ಅಕ್ರಮ ಗಣಿಗಾರಿಕೆ ವಿರುದ್ಧ ಕಠಿಣ ಕ್ರಮ

ಚಿಕ್ಕಬಳ್ಳಾಪುರ : ರಾಜ್ಯದಲ್ಲಿ ಅಕ್ರಮವಾಗಿ ಗಣಿಗಾರಿಕೆ ನಡೆಸುವವರ ವಿರುದ್ಧ ಕಠಿಣ ಕಾನೂನು ರೀತಿಯ ಕ್ರಮ ಜರಗಿಸಲಾಗುವುದು ಎಂದು ಎಡಿಜಿಪಿ ಪ್ರತಾಪ್ ರೆಡ್ಡಿ ತಿಳಿಸಿದರು.

ಚಿಕ್ಕಳ್ಳಾಪುರ ಜಿಲ್ಲೆಯಲ್ಲಿ ನಡೆದ ದುರಂತ ಸ್ಥಳಕ್ಕೆ ಭೇಟಿ ನೀಡಿನಂತರ ಮಾತನಾಡಿದ ಅವರು ಜಿಲ್ಲೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಈಗಾಗಲೇ ಐದು ಜನರ ಮೃತದೇಹಗಳು ಪತ್ತೆಯಾಗಿದ್ದು ಮತ್ತೊಬ್ಬ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಘಟನೆಯಲ್ಲಿ ಗಾಯಗೊಂಡಿರುವ ಚಾಲಕನನ್ನು ವಿಚಾರಣೆಗೆ ಒಳಪಡಿಸಲಾಗವುದು. ಕಳೆದ 7ರಂದು ಪೊಲೀಸ್ ಇಲಾಖೆಯಿಂದ ದಾಳಿ ನಡೆಸಲಾಗಿದೆ. ಅಧಿಕೃತವಾಗಿ ಕ್ವಾರಿ ನಡೆಸುತ್ತಿದ್ದರೂ ಸಹ ಸ್ಫೋಟಕ ವಸ್ತುಗಳ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಹೀಗಾಗಿ ಮಾಲೀಕರ ವಿರುದ್ಧ ದೂರು ದಾಖಲಿಸಲಾಗಿದ್ದು ಪ್ರಸ್ತುತ ಅವರು ನಾಪತ್ತೆಯಾಗಿದ್ದಾರೆ ಎಂದರು.

ಸತತವಾಗಿ ನಡೆಯುತ್ತಿರುವ ಪೊಲೀಸರ ದಾಳಿ ಭೀತಿಯಿಂದ ಅಕ್ರಮವಾಗಿ ಶೇಖರಿಸಿದ್ದ ಜಿಲೆಟಿನ್ ಸಾಗಿಸುವ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿದ್ದು ಇದರ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಲು ಐಜಿಪಿ ಮೇಲುಸ್ತುವಾರಿಯಲ್ಲಿ ವಿಶೇಷ ತಂಡ ರಚಿಸಲು ಕ್ರಮಕೈಗೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ಕ್ವಾರಿ ಮತ್ತು ಗಣಿಗಾರಿಕೆಗೆ ನಡೆಸಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಯಿಂದ ಪರವಾನಗಿಯನ್ನು ಪಡೆಯಬೇಕಾಗುತ್ತದೆ. ಕಲ್ಲುಬಂಡೆಗಳನ್ನು ಸ್ಫೋಟಿಸಲು ಡೈರೆಕ್ಟರ್ ಜನರಲ್ ಮೈನಿಂಗ್ ಸೇಫ್ಟಿ ಇಲಾಖೆಯಿಂದ ಪರವಾನಗಿ ಪಡೆದವರು ಮಾತ್ರ ಸ್ಫೋಟಿಸಬೇಕು ಎಂದು ಕೇಂದ್ರ ಸರ್ಕಾರ ಸ್ಪಷ್ಟವಾದ ನೀತಿ ನಿಯಮ ರೂಪಿಸಿದೆ ಎಂದರು.

Related