ಮಹಿಳಾ ಉದ್ಯಮಶೀಲತೆಗೆ ‘ಸ್ವಾವಲಂಬನೆ’ ಬಲ

ಮಹಿಳಾ ಉದ್ಯಮಶೀಲತೆಗೆ ‘ಸ್ವಾವಲಂಬನೆ’ ಬಲ

ಬೆಂಗಳೂರು: ಗ್ರಾಮೀಣ ಮಹಿಳಾ ಉದ್ಯಮಶೀಲತೆಯನ್ನು ಉತ್ತೇಜಿಸಲು ‘ಸ್ವಾವಲಂಬನೆ’ ಎಂಬ ಹೆಸರಿನ ಯೋಜನೆಗೆ ಗುರುವಾರ ಚಾಲನೆ ನೀಡಲಾಯಿತು.
ಬನ್ನೇರುಘಟ್ಟ ರಸ್ತೆಯ ಐಐಎಂಬಿ ಸಂಸ್ಥೆಯಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ಕಾರ್ಯಾಗಾರದಲ್ಲಿ ಈ ಯೋಜನೆಯನ್ನು ಉದ್ಘಾಟಿಸಲಾಯಿತು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಉತ್ತೇಜನಾ ಸಂಸ್ಥೆ ಹಾಗೂ ಐಐಎಂಬಿ ಸಂಸ್ಥೆಗಳ ಸಹಯೋಗದಲ್ಲಿ ಕಾರ್ಯಾಗಾರ ನಡೆದಿದೆ.
‘ಗ್ರಾಮೀಣ ಕರ್ನಾಟಕ ಭಾಗದಲ್ಲಿ ಮಹಿಳಾ ಒಡೆತನದಲ್ಲಿರುವ ಕೃಷಿಯೇತರ ವ್ಯವಹಾರಗಳನ್ನು ಉತ್ತೇಜಿಸಲು ಈ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಗುಡಿ ಕೈಗಾರಿಕೆಗಳಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ಉದ್ದೇಶ ಹೊಂದಿದೆ, ಕರ್ನಾಟಕದ ಈ ಪ್ರಯತ್ನ ದೇಶಕ್ಕೆ ಮಾದರಿಯಾದುದು’ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಪರ ಕಾರ್ಯದರ್ಶಿ ಚರಣಜಿತ್ ಸಿಂಗ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಮಹಿಳಾ ಉದ್ಯಮಶೀಲತೆಗೆ ನೆರವು ನೀಡಲು ಅರ್ಹ ಸ್ವಸಹಾಯ ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿತ್ತು. ಸುಮಾರು ನಾಲ್ಕು ಸಾವಿರಗಳು ಸ್ವೀಕೃತವಾಗಿದ್ದು, ಅದರಲ್ಲಿ 150 ಗುಂಪುಗಳನ್ನು ಆಯ್ಕೆ ಮಾಡಲಾಗಿದೆ. ಈ ಗುಂಪುಗಳಿಗೆ ಉದ್ಯಮ ನಡೆಸಲು ಅಗತ್ಯ ಹಣಕಾಸಿನ ನೆರವು, ಬಡ್ಡಿರಹಿತ ಸಾಲ, ಉದ್ಯಮಕ್ಕೆ ಸಂಬಂಧಿಸಿ ಐಐಎಂಬಿ ವತಿಯಿಂದ ತಾಂತ್ರಿಕ ಮತ್ತು ಆಡಳಿತಾತ್ಮಕ ನೆರವು ಸಿಗಲಿದೆ’ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಪರ ಕಾರ್ಯದರ್ಶಿ ಉಮಾ ಮಹದೇವನ್ ಹೇಳಿದರು.
ಕಾಯಾಗಾರದಲ್ಲಿ ರಾಜ್ಯದ ಗ್ರಾಮೀಣ ಭಾಗದ ಇನ್ನೂರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದು, ಗ್ರಾಮೀಣ ಉದ್ಯಮಶೀಲತೆಯ ದೃಷ್ಟಿಕೋನಗಳು, ಗ್ರಾಮೀಣ ಮಹಿಳೆಯರ ಜೀವನ ಉತ್ತಮಗೊಳಿಸುವುದು, ಮಹಿಳಾ ಉದ್ಯಶೀಲತೆಯ ವ್ಯಾಪ್ತಿ, ಸಣ್ಣ ಉದ್ಯಮಗಳಿಗೆ ಸಾಲದ ಅರ್ಹತೆ, ಬ್ರಾಂಡಿಂಗ್ ಮತ್ತು ಮಾರುಕಟ್ಟೆಯ ಮಹತ್ವ, ಕಾನೂನು ಅರಿವು ಇತ್ಯಾದಿ ವಿಷಯಗಳ ಕುರಿತು ಪ್ರತ್ಯೇಕ ಚರ್ಚೆ ನಡೆಯಲಿದೆ’ ಎಂದು ಐಐಎಂಬಿ ಸಂಸ್ಥೆಯ ಉದ್ಯಮಶೀಲತೆ ವಿಭಾಗದ ಪ್ರಾಧ್ಯಾಪಕಿ ಪ್ರೊ.ಶ್ರೀವರ್ಧಿನಿ ಝಾ ಹೇಳಿದರು.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸ್ವಾತಿ ಶರ್ಮ, ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕಿ ಡಾ.ರಾಗಪ್ರಿಯಾ, ಮುಖ್ಯ ಕಾರ್ಯಾಚರಣೆ ಅಧಿಕಾರಿ ಕೆ.ಅನುಪಮಾ ಇದ್ದರು.
‘ಸ್ವಾವಲಂಬನೆ’ ಯೋಜನೆಯ ಫಲಾನುಭವಿಯೊಬ್ಬರಿಗೆ ಚಕ್ ವಿತರಿಸಲಾಯಿತು. ರಾಷ್ಟ್ರೀಯ ಜೀವನೋಪಾಯ ಅಭಿಯಾನ ನಿರ್ದೇಶಕಿ ಡಾ.ರಾಗಪ್ರಿಯಾ, ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಪರ ಕಾರ್ಯದರ್ಶಿ ಉಮಾ ಮಹದೇವನ್ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಅಪರ ಕಾರ್ಯದರ್ಶಿ ಚರಣಜಿತ್ ಸಿಂಗ್, ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸ್ವಾತಿ ಶರ್ಮ ಮತ್ತಿತರರು ಉಪಸ್ಥಿತರಿದ್ದರು.

Related