ಸಿಗದ ಪರಿಹಾರ | ಪ್ರಚಾರಕ್ಕೆ ಸೀಮಿತವಾದ ಘೋಷಣೆ

ಸಿಗದ ಪರಿಹಾರ | ಪ್ರಚಾರಕ್ಕೆ ಸೀಮಿತವಾದ ಘೋಷಣೆ

ರಾಮದುರ್ಗ : ತಾಲೂಕಿನಲ್ಲಿ ಪ್ರವಾಹ ಉಂಟಾಗಿ ವರ್ಷ ಕಳೆದರೂ ಸಂತ್ರಸ್ಥರಿಗೆ ಇನ್ನೂ ಸಮರ್ಪಕವಾಗಿ ಪರಿಹಾರ ಸಿಗದೆ ಅತಂತ್ರದಲ್ಲಿರುವಾಗಲೇ ಕೂಡಲೇ ಸರಕಾರ ಪರಿಹಾರ ನೀಡಿ ನದಿ ಪಾತ್ರದ ಜನರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಮಾಜಿ ಶಾಸಕ ಅಶೋಕ ಪಟ್ಟಣ ಆಗ್ರಹಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಅಗಸ್ಟ್ನಲ್ಲಿ ಮಲಪ್ರಭಾ ನದಿಗೆ ಪ್ರವಾಹ ಬಂದು ಹಾನಿಗೊಳಗಾದ ಕುಟುಂಬಗಳಿಗೆ ತಲಾ 10.000 ರೂ. ಮನೆ ದುರಸ್ಥಿಗೆ 50 ಸಾವಿರ ರೂ. ಮನೆ ನಿರ್ಮಾಣಕ್ಕೆ 5 ಲಕ್ಷ ನೀಡುವುದಾಗಿ ಸರಕಾರ ಘೋಷಣೆ ಮಾಡಿತ್ತು.

ಮಲಪ್ರಭಾ ನದಿಯ ಪ್ರವಾಹ ಸಂತ್ರಸ್ತರ ಪರಿಸ್ಥಿತಿ ಅವಲೋಕಿಸಲು ಬಂದಿದ್ದ ಮುಖ್ಯಮಂತ್ರಿಗಳು ಮಲಪ್ರಭಾ ನದಿಗೆ 9ಕಿ.ಮೀ. ತಡೆಗೋಡೆ ನಿರ್ಮಾಣಕ್ಕೆ ನೀರಾವರಿ ಇಲಾಖೆಯಿಂದ 126 ಕೋಟಿ ರೂ. ಅನುದಾನ ಮಂಜೂರು ಮಾಡುವುದಾಗಿ ಹೇಳಿದ್ದರು.

ಆದರೆ ಈವರೆಗೆ ಒಂದು ಪೈಸೆ ಅನುದಾನ ಬಿಡುಗಡೆಯಾಗಿಲ್ಲ. ಆದರೇ ಕ್ಷೇತ್ರದ ಶಾಸಕರು ಮಾತ್ರ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದು ಹೇಳುತ್ತಿದ್ದಾರೆ ಎಂದರು.

ಮಳೆಗಾಲ ಆರಂಭವಾಗಿದ್ದು ಮತ್ತೆ ಮಲಪ್ರಭಾ ನದಿಗೆ ಪ್ರವಾಹ ಬರುವ ಸಾಧ್ಯತೆ ಹೆಚ್ಚಾಗಿದೆ. ಕಾರಣ ನದಿ ದಂಡೆಯ ಗ್ರಾಮಗಳ ನಾಗರೀಕರು ಮುನ್ನೆಚ್ಚರಿಕೆಯಾಗಿ ಸೂಕ್ತ ಸ್ಥಳಕ್ಕೆ ತೆರಳಬೇಕು. ಸರ್ಕಾರ ಮತ್ತು ಅಧಿಕಾರಿಗಳು ಪ್ರವಾಹ ಬಂದಾಗ ನಿಮ್ಮನ್ನು ರಕ್ಷಣೆ ಮಾಡಿಕೊಳ್ಳಿ ಎಂದು ಹೇಳುತ್ತಾರೆ. ಆದರೆ ಈಗಲೇ ಎಚ್ಚೆತ್ತು ನಿಮ್ಮ ರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದ ಅಶೋಕ ಪಟ್ಟಣ ಅಗತ್ಯ ಬಿದ್ದರೆ ಕಾಂಗ್ರೆಸ್ ಪಕ್ಷ ತಮ್ಮ ನೆರವಿಗೆ ಬರಲು ಸಿದ್ಧವಿದೆ ಎಂದು ಹೇಳಿದರು.

Related