ಈರುಳ್ಳಿ ಬೆಳೆ-ಕೊಳೆ ರೋಗಕ್ಕೆ ಸಿಲುಕಿ ಮಣ್ಣು ಪಾಲು

ಈರುಳ್ಳಿ ಬೆಳೆ-ಕೊಳೆ ರೋಗಕ್ಕೆ ಸಿಲುಕಿ ಮಣ್ಣು ಪಾಲು

ಬಬಲೇಶ್ವರ: ಬದುಕು ಎಂಬ ಜಟಕಾ ಬಂಡಿಯನ್ನು ಸರಿದೂಗಿಸಲು ರೈತ ಬೆಳೆದ ಈರುಳ್ಳಿ ಬೆಳೆ ಈಗ ಕೊಳೆ ರೋಗಕ್ಕೆ ತುತ್ತಾಗಿ ನೆಲದಪಾಲಾಗಿದೆ. ನೆಲದಪಾಲಾಗಿರುವ ಈ ಬೆಳೆಯನ್ನು ಟ್ರ್ಯಾಕ್ಟಟರ್ ಬಾಡಿಗೆ ನೀಡಿ ಕಟರ್ ಹೊಡೆಯುತ್ತಿರುವ ದೃಶ್ಯ ಕಂಡು ಬಂದಿದ್ದು ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದ್ಯಾವಾಪೂರ ಗ್ರಾಮದ ಭೀಮನಗೌಡ ಪಾಟೀಲ ಅವರ ತೊಟದಲ್ಲಿ.

ರೈತ ಭೀಮನಗೌಡ ಪಾಟೀಲ ಅವರು 3 ಎಕರೆ ಭೂಮಿಯಲ್ಲಿ ಈರುಳ್ಳಿ ನಾಟಿ ಮಾಡಿದ್ದರು, ಇನ್ನೇನು ಪಸಲು ಕೈ ಸೇರುವಷ್ಟರಲ್ಲಿ ಕೊಳೆ ರೋಗ ಬಂದು ಕೊಳೆ ಬೆಳೆದ ಬೆಳೆ ಸಂಪೂರ್ಣ ನೆಲಸಮವಾಗಿದೆ. ರೋಗದ ಬಾದೆಗೆ ತುತ್ತಾಗಿರುವ ಈರುಳ್ಳಿ ಬೆಳೆಯನ್ನು ನೊಡಲಾಗದೆ ಟ್ರ್ಯಾಕ್ಟಟರ್ ಮೂಲಕ ಕಟರ್ ಹೊಡಿಸಿ ಈರುಳ್ಳಿಯನ್ನು ನಾಶಪಡಿಸಿದ್ದಾರೆ.

ಕಳೆದ ನಾಲ್ಕು ವರ್ಷದಿಂದ ಕಟಾವಿನ ಅಂಚಿನಲ್ಲಿ ಈ ರೋಗಕ್ಕೆ ಸಿಲುಕಿದ ಈರುಳ್ಳಿ ದ್ಯಾವಾಪೂರ ಸೇರಿದಂತೆ ಸುತ್ತಮುತ್ತಲಿನ ಹಳ್ಳಿಗಳಿಗೂ ಈ ರೋಗ ಹರಡಿ ಸುಮಾರು 50-60 ಎಕರೆಯಲ್ಲಿ ಬೆಳೆದ ಬೆಳೆ ನಾಶವಾಗಿದೆ.

ಒಂದು ಎಕರೆ ಈರುಳ್ಳಿ ಬೆಳೆ ಬೆಳೆಯಲು ಸುಮಾರು 35-40 ಸಾವಿರ ರೂ. ಖರ್ಚು ಮಾಡಿ ಮಗುವಿನಂತೆ ಜೋಪಾನ ಮಾಡಿದರೂ ಸಹಿತ ಈರುಳ್ಳಿ ರೈತನ ಕೈ ಸೆರುತ್ತಿಲ್ಲಾ. ಮಾಡಿದ ಖರ್ಚಿನಲ್ಲಿ ನಯಾ ಪೈಸೆ ಕೂಡಾ ಕೈ ಸೇರಿಲ್ಲಾ. ರೋಗ ನಿವಾರಣೆಗಾಗಿ ಔಷಧಿ ಸಿಂಪಡಣೆ ಮಾಡಿ ಮೈ ತುಂಬಾ ಸಾಲ ಮಾಡಿಕೊಂಡಿದ್ದಾನೆ, ಸಾಲ ತೀರಿಸಲಾಗದೆ ರೈತ ಕಂಗಾಲಾಗಿದ್ದಾನೆ.

ವಾಣಿಜ್ಯ ಬೆಳೆಯಾದ ಕಬ್ಬಿಗೂ ಗೊಣ್ಣೆ ಹುಳುವಿನ ಕಾಟ ಹೆಚ್ಚಾಗಿದ್ದು ಈ ಬಾರಿ ರೈತನ ಕೈ ಹಿಡಿಯದಿರುವದು ದುರ್ದೈವದ ಸಂಗತಿಯಾಗಿದೆ. ಕೃಷಿ ಇಲಾಖೆಯ ಅಧಿಕಾರಿಗಳು ರೋಗಕ್ಕೆ ತುತ್ತಾಗಿ ನಾಶವಾಗಿರೋ ಬೆಳೆಯನ್ನು ಪರಿಶೀಲಿಸಿ ಸೂಕ್ತ ಪರಿಹಾರ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

Related