ನಾನು ಯಾವತ್ತೂ ಜನ್ಮದಿನವನ್ನು ಆಚರಿಸಿದವನಲ್ಲ – ಸಿದ್ದರಾಮಯ್ಯ

ನಾನು ಯಾವತ್ತೂ ಜನ್ಮದಿನವನ್ನು ಆಚರಿಸಿದವನಲ್ಲ – ಸಿದ್ದರಾಮಯ್ಯ

ಆಗಸ್ಟ್ 3ರಂದು ಜನುಮದಿನದ ಅಂಗವಾಗಿ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಹಾಗೂ ಹಿತೈಷಿಗಳು ಆಯೋಜಿಸಿರುವ ಸಿದ್ದರಾಮೋತ್ಸವ ಕಾರ್ಯಕ್ರಮವನ್ನ ಯಾವುದೇ ಶಕ್ತಿ ಪ್ರದರ್ಶನ ಮಾಡಲು ನಡೆಸುತ್ತಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಯಾವತ್ತೂ ನನ್ನ ಜನ್ಮ ದಿನಾಚರಣೆ ಆಚರಿಸಿಕೊಂಡವನಲ್ಲ. ಈ ವರ್ಷ ನನಗೆ 75 ವಸಂತಗಳು ತುಂಬುವ ಕಾರಣ ನನ್ನ ಜೀವನದ ಅಮೃತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದೇನೆ. ಆದ ಕಾರಣ ಅಭಿಮಾನಿಗಳು ಹಾಗೂ ಹಿತೈಷಿಗಳು ಆಯೋಜಿಸುತ್ತಿರುವ ಕಾರ್ಯಕ್ರಮ ಹೇಗೆ ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಲಿದೆ ಎಂದು ಪ್ರಶ್ನಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ನಾಯಕರು ಭಾಗಿಯಾಗಲಿದ್ದಾರೆ. ರಾಹುಲ್ ಗಾಂಧಿ, ರಣದೀಪ್ ಸುರ್ಜೆವಾಲಾ ಹಾಗೂ ಕೆ.ಸಿ.ವೇಣುಗೋಪಾಲ್ಗೆ ನಾನೇ ಖುದ್ದು ಆಹ್ವಾನ ನೀಡಿದ್ದೇನೆ. ಅವರು ಸಹ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಸಿದ್ದರಾಮೋತ್ಸವಕ್ಕೆ ನಾನು ಯಾವುದೇ ಬಿಜೆಪಿ ನಾಯಕರನ್ನು ಆಹ್ವಾನಿಸುತ್ತಿಲ್ಲ. ನಾನು ಯಾಕೆ ಅವರನ್ನು ಕರೆಯಲಿ? ಈ ಕಾರ್ಯಕ್ರಮ ಕೇಲವ ಕಾಂಗ್ರೆಸ್ ನಾಯಕರಿಗೆ ಮಾತ್ರ ಸೀಮಿತ. ಆದರೆ ಬಿಜೆಪಿ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕಾ ಅಥವಾ ಬೇಡವಾ ಎಂಬುದಕ್ಕೆ ಆರ್.ವಿ.ದೇಶಪಾಂಡೆ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ ಸಮಿತಿಯವರು ಈ ಬಗ್ಗೆ ನಿರ್ಧರಿಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದರು.

ಈ ವೇಳೆ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಬಿಜೆಪಿ ಲೇವಡಿ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ತಮ್ಮ 77ನೇ ಜನ್ಮದಿನಾಚರಣೆ ಆಚರಸಿಕೊಂಡರಲ್ಲ ಅದಕ್ಕೆ ಬಿಜೆಪಿಯವರು ಏನು ಹೇಳತ್ತಾರೆ? ತಮ್ಮ ನಾಯಕರು ಜನ್ಮ ದಿನಾಚರಣೆಯನ್ನು ಆಚರಿಸಿಕೊಂಡಾಗ ಮಾಡದ ಟೀಕೆ ಕಾಂಗ್ರೆಸ್ ನವರು ಆಚರಿಸಿಕೊಂಡರೆ ಯಾಕೆ ಮಾಡಬೇಕು? ಇದು ಆರ್ ಎಸ್ ಎಸ್ ಸಂಸ್ಕೃತಿಯ ಪ್ರತಿಬಿಂಬ ಎಂದು ಕಿಡಿಕಾರಿದ್ದಾರೆ.

Related