ಸ್ವಾವಲಂಬಿಗಳಾಗಿ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು: ಸಿದ್ದಗಂಗಾ ಶ್ರೀ

ಸ್ವಾವಲಂಬಿಗಳಾಗಿ ಸಿಕ್ಕ ಅವಕಾಶ ಸದುಪಯೋಗ ಪಡಿಸಿಕೊಳ್ಳಬೇಕು: ಸಿದ್ದಗಂಗಾ ಶ್ರೀ

ತುಮಕೂರು,ಜ. 28: ಉದ್ಯೋಗ ಬಯಸಿ ಬರುವ ಯುವಕರು ವಿದ್ಯಾಭ್ಯಾಸದ ಜೊತೆಗೆ ಕೌಶಲ್ಯ, ಸಂವಹನ ಕಲೆ, ಮಾನವೀಯ ಗುಣಗಳು ಮತ್ತು ಅವರು ಸಂಸ್ಥೆಗೆ ಹೇಗೆ ಬೆನ್ನೆಲುಬಾಗಿ ಇರುತ್ತಾರೆ ಎಂದು ಉದ್ಯೋಗ ನೀಡುವ ಸಂಸ್ಥೆ ಬಯಸುತ್ತದೆ, ಎಂಬ ಹಿತವಚನವನ್ನು ನುಡಿದರು ತುಮಕೂರಿನ ಸಿದ್ದಗಂಗಾ ಮಠದ ಪೀಠಾಧ್ಯಕ್ಷರಾದ ಶ್ರೀಶ್ರೀಶ್ರೀ ಸಿದ್ಧಲಿಂಗ ಸ್ವಾಮಿಗಳು.

ಒಕ್ಕಲಿಗ ಯುವ ಬ್ರಿಗೇಡ್ ಹಾಗೂ ಎನ್ಆರ್ ಐ ವತಿಯಿಂದ ಶ್ರೀ ಸಿದ್ಧಗಂಗಾ ಪಾಲಿಟೆಕ್ನಿಕ್ ನಲ್ಲಿ ಆಯೋಜಿಸಲಾದ ದುಡಿಯುವ ಕೈಗಳಿಗೆ ಉದ್ಯೋಗ ಮೇಳದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಒಂದು ಹುದ್ದೆಗೆ ಸಾವಿರಾರು ಆಕಾಂಕ್ಷಿಗಳು ಇರುತ್ತಾರೆ. ಹಾಗೆ ಇಂದು ತುಮಕೂರಿನಲ್ಲಿ ಪೊಲೀಸ್ ಪೇದೆಗಳ ಪರೀಕ್ಷೆ ಇದ್ದು ವಿವಿಧ ಜಿಲ್ಲೆಗಳಿಂದ ಸಾವಿರಾರು ಉದ್ಯೋಗಾಕಾಂಕ್ಷಿಗಳು ಬಂದಿರುತ್ತಾರೆ.

ಅಭ್ಯರ್ಥಿಗಳಿಗೆ ಶಿಕ್ಷಣವಷ್ಟೇ ಮುಖ್ಯವಲ್ಲ. ನಿಮ್ಮಲ್ಲಿರುವ ಮಾನವೀಯ ಗುಣಗಳು, ಸಾಮಾನ್ಯ ಜ್ಞಾನ ಹಾಗೂ ನಿಮ್ಮ ಸಾಮಾಜಿಕ ನಡವಳಿಕೆಗಳು ಸಹ ಉದ್ಯೋಗ ಪಡೆಯಲು ಸಹಕಾರಿಯಾಗಿರುತ್ತದೆ. ನಿರುದ್ಯೋಗ ಸಮಸ್ಯೆಯನ್ನು ಬುಡಮೇಲು ಮಾಡಲು ಇದೊಂದು ಉತ್ತಮ ವೇದಿಕೆ ಎಂದರು.

ಸ್ವಾವಲಂಬಿಗಳಾಗಿ ಬದುಕಲು ಇಂತಹದ್ದೇ ಹುದ್ದೆ ಬೇಕು ಅಂತಿಲ್ಲ.ಆದರೆ ನಾವು ಮಾಡುವ ಕೆಲಸದಲ್ಲಿ ಶ್ರದ್ದೆ ಮತ್ತು ಪ್ರಾಮಾಣಿಕತೆ ಮುಖ್ಯ. ಇತ್ತೀಚಿನ ದಿನಗಳಲ್ಲಿ ಕೃಷಿಯ ಕಡೆ ಯಾರು ಸಹ ತಿರುಗಿಯೂ ನೋಡುತ್ತಿಲ್ಲ. ಕರೋನ ಸಂದರ್ಭದಲ್ಲಿ ಕೆಲವರು ಕೃಷಿಯ ಕಡೆಗೆ ಮುಖ ಮಾಡಿರುವುದು ಒಳ್ಳೆಯ ಬೆಳವಣಿಗೆ.

ಪರಾವಲಂಬಿಗಳಾಗದೆ ಸ್ವಾವಲಂಬಿಗಳಾಗಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಒಂದು ಸಂಸ್ಥೆ ಮತ್ತು ಉದ್ಯೋಗಿ ಇಬ್ಬರ ನಡುವೆ ಬಿಡಿಸಲಾರದ ಸಂಬಂಧವಿದೆ ಎಂದು ಹಿತವಚನ ನುಡಿದರು ಸ್ವಾಮೀಜಿ.

ಕಾರ್ಯಕ್ರಮವನ್ನು ಉದ್ಘಾಟಿಸಿದ ಇಸ್ಕಾನ್‌ನ ಉಪಾಧ್ಯಕ್ಷರಾದ ಶ್ರೀಭಕ್ತ ನಂದಾ ನಂದನ ಪ್ರಭು ಮಾತನಾಡಿ, ಕೌಶಲ್ಯ ಮತ್ತು ಸ್ವಸಾಮರ್ಥ್ಯ ಬೆಳೆಸುವ ನಿಟ್ಟಿನಲ್ಲಿ ಒಕ್ಕಲಿಗ ಯುವ ಬ್ರಿಗೇಡ್,ಎನ್.ಅರ್.ಐ ಒಕ್ಕಲಿಗರ ಬ್ರಿಗೇಡ್ ಹಮ್ಮಿಕೊಂಡಿರುವ ಉದ್ಯೋಗ ಮೇಳ ದುಡಿಯುವ ಕೈಗಳಿಗೆ ಕೆಲಸ ನೀಡಲು ಸಹಕಾರಿಯಾಗಿದೆ. ಕೌಶಲ್ಯ ಮತ್ತು ಇಚ್ಚಾಶಕ್ತಿಯ ಬೆಲೆಯನ್ನು ಯುವಕರಿಗೆ ತಿಳಿಸಿದರು.

ಬ್ರಿಗೇಡ್ ನ ಸಂಸ್ಥಾಪಕ ಅಧ್ಯಕ್ಷರಾದ ನಂಜೇಗೌಡ ನಂಜುಂಡ ಸಂಸ್ಥೆಯ ಧ್ಯೇಯಗಳಾದ ವಿದ್ಯಾಭ್ಯಾಸ ಮತ್ತು ಉದ್ಯೋಗದ ಪ್ರಾಮುಖ್ಯತೆ ತಿಳಿಸಿ ಮುಂಬರುವ ದಿನಗಳಲ್ಲಿ ಶಿವಮೊಗ್ಗದಲ್ಲಿ ಉದ್ಯೋಗ ಮೇಳ ಆಯೋಜಿಸುವುದಾಗಿ ತಿಳಿಸಿದರು. ತುಮಕೂರಿನಲ್ಲಿ ನಡೆಯುತ್ತಿರುವ ಉದ್ಯೋಗ ಮೇಳದ ಸದುಪಯೋಗವನ್ನು ಪಡಿಸಿಕೊಳ್ಳಲು ಆಕಾಂಕ್ಷಿಗಳನ್ನು ಕೋರಿಕೊಂಡರು.

ಶಂಕರ ಲಿಂಗೇಗೌಡ ಮಾತನಾಡುತ್ತಾ ಕೃಷಿ ಮತ್ತು ಕಾರ್ಖಾನೆಗಳಿಗಿಂತ ಇಂದು ಸೇವಾ ವಲಯಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇದೆ ಮತ್ತು ವಿಪುಲ ಅವಕಾಶಗಳು ಇವೆ. ಐಟಿ ಬಿಟಿ ವಲಯದಲ್ಲಿ 20 ಲಕ್ಷ ಮಂದಿ ಉದ್ಯೋಗದಲ್ಲಿ ತೊಡಗಿಕೊಂಡಿದ್ದರೆ ಸೇವಾ ವಲಯದಲ್ಲಿ 20 ಲಕ್ಷಕ್ಕೂ ಅಧಿಕ ಜನರು ಸೇವೆ ಸಲ್ಲಿಸುತ್ತಿದ್ದಾರೆ.
ಇಂದಿನ ಯುವಕರು ಪದವಿ ಜೊತೆ ಜೊತೆಗೆ ಕೌಶಲ್ಯವನ್ನು ಮತ್ತು ಕಂಪ್ಯೂಟರ್ ಜ್ಞಾನವನ್ನು ಬೆಳೆಸಿಕೊಳ್ಳುವುದು ಅಚ್ಚಗತ್ಯ ಎಂದರು.
ಕಾರ್ಮಿಕ ಆಯುಕ್ತರಾದ ಗೋಪಾಲಕೃಷ್ಣರವರು ಮಾತನಾಡುತ್ತಾ ಸರ್ಕಾರವು ಎಲ್ಲರಿಗೂ ಸರ್ಕಾರಿ ಕೆಲಸ ಕೊಡಲು ಸಾಧ್ಯವಿಲ್ಲ ಆದ್ದರಿಂದ ಇಂದಿನ ಯುವಕರು ಕೌಶಲ್ಯವನ್ನು ರೂಡಿಸಿಕೊಳ್ಳಬೇಕು. ರಾಜ್ಯ ಸರ್ಕಾರದ ವತಿಯಿಂದ ಫೆಬ್ರವರಿ 19 ಮತ್ತು 20 ರಂದು ಬೃಹತ್ ಉದ್ಯೋಗ ಮೇಳವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುತ್ತಿದ್ದು ಇದರ ಉಪಯೋಗವನ್ನು ಪಡೆದುಕೊಳ್ಳಲು ಕೋರಿದರು.

ವೇದಿಕೆಯಲ್ಲಿ ಇನ್ಸಿಟ್ಯೂಟ್ ಅಫ್ ಯೂರಿಯಾಲಜಿ ಸ್ಥಾಪಕ ನಿರ್ದೇಶಕ ಡಾ.ಜಿ.ಕೆ. ವೆಂಕಟೇಶ್,
ಸುರೇಶ ಘಟ್ಟಪುರ್, ಅಮೆರಿಕಾದ ಸಮಾಜ ಸೇವಕರಾದ ಕಿರಣ್ ಅಗ್ರಹಾರ , ಪವರ್ ಟಿವಿ ಇನ್ಪುಟ್ ಹೆಡ್ ಆದ ಲೋಕೇಶ್ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದವು.

Related