ಸೇವಾ ಸಿಂಧು ನೋಂದಣಿ ಕಡ್ಡಾಯ

ಸೇವಾ ಸಿಂಧು ನೋಂದಣಿ ಕಡ್ಡಾಯ

ಬೆಂಗಳೂರು : ಬೇರೆ-ಬೇರೆ ರಾಜ್ಯಗಳಿಂದ ರೈಲಿನಲ್ಲಿ ಕರ್ನಾಟಕಕ್ಕೆ ಬರುವ ಪ್ರಯಾಣಿಕರು ಕಡ್ಡಾಯವಾಗಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಬೇಕು. ಈ ಕುರಿತು ಪ್ರಯಾಣಿಕರಿಗೂ ಮಾಹಿತಿ ನೀಡಿ ಎಂದು ಕರ್ನಾಟಕ ಸರ್ಕಾರ ಭಾರತೀಯ ರೈಲ್ವೆಗೆ ಮನವಿ ಮಾಡಿದೆ.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ. ಎಂ. ವಿಜಯ ಭಾಸ್ಕರ್ ರೈಲ್ವೆ ಬೋರ್ಡ್ ಛೇರ್ಮನ್ ವಿ. ಕೆ. ಯಾದವ್‌ಗೆ ಈ ಕುರಿತು ಪತ್ರ ಬರೆದಿದ್ದಾರೆ. ಕರ್ನಾಟಕಕ್ಕೆ ಬರುವ ರೈಲಿನಲ್ಲಿ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡುವ ಕುರಿತು ಘೋಷಣೆ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ರಾಜ್ಯಕ್ಕೆ ಆಗಮಿಸುವ ಹಲವು ಪ್ರಯಾಣಿಕರು ಪೋರ್ಟಲ್‌ನಲ್ಲಿ ನೋಂದಣಿ ಮಾಡುತ್ತಿಲ್ಲ. ಇದರಿಂದಾಗಿ ಕರ್ನಾಟಕಕ್ಕೆ ಆಗಮಿಸುವ ಪ್ರಯಾಣಿಕರ ಲೆಕ್ಕ ಸಿಗುತ್ತಿಲ್ಲ. ಮಾಹಿತಿ ಸಂಗ್ರಹದ ಕಾರಣಕ್ಕೆ ನೋಂದಣಿ ಕಡ್ಡಾಯಗೊಳಿಸಲಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ದೆಹಲಿ, ಬಿಹಾರ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ಸಾವಿರಾರು ಜನರು ಕರ್ನಾಟಕಕ್ಕೆ ಆಗಮಿಸುತ್ತಿದ್ದಾರೆ. ಆದರೆ ಹಲವು ಜನರು ನೋಂದಣಿ ಮಾಡಿಸುತ್ತಿಲ್ಲ. ಕರ್ನಾಟಕ ಸರ್ಕಾರ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ವಿವಿಧ ರಾಜ್ಯಗಳ ರೈಲು ನಿಲ್ದಾಣದಿಂದ ರೈಲು ಹೊರಡುವಾಗ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಸುವಂತೆ ಘೋಷಣೆ ಮಾಡಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ರೈಲಿನಲ್ಲಿ ಆಗಮಿಸಿದವರು ನೋಂದಣಿ ಮಾಡಿಸಿಲ್ಲವಾದರೆ ಅವರನ್ನು ಹೋಂ ಕ್ವಾರಂಟೈನ್‌ಗೆ ಕಳಿಸಲಾಗುವುದಿಲ್ಲ ಎಂದು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

Related