ಸಂಕೀಘಟ್ಟ ಸರ್ಕಾರಿ ಶಾಲೆ ಅಭಿವೃದ್ಧಿ ರಾಜ್ಯಕ್ಕೇ ಮಾದರಿ : ಅಶ್ವತ್ಥನಾರಾಯಣ

ಸಂಕೀಘಟ್ಟ ಸರ್ಕಾರಿ ಶಾಲೆ ಅಭಿವೃದ್ಧಿ ರಾಜ್ಯಕ್ಕೇ ಮಾದರಿ : ಅಶ್ವತ್ಥನಾರಾಯಣ

ಮಾಗಡಿ,  ಜು 12 : ವಿದ್ಯಾರ್ಥಿಗಳ ತೀವ್ರ ಕೊರತೆ ಎದುರಿಸುತ್ತಿದ್ದ ಎಂಟು ಶಾಲೆಗಳನ್ನು ವಿಲೀನಗೊಳಿಸಿ, ಸಂಕೀಘಟ್ಟದ ಗ್ರಾಮ‌ ಪಂಚಾಯಿತಿ ಪಬ್ಲಿಕ್‌ ಶಾಲೆಯನ್ನು ಗುಣಮಟ್ಟದ ಶಾಲೆಯನ್ನಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಮಂಗಳವಾರ ಶಾಲೆಗೆ ಭೇಟಿ ನೀಡಿ, ಪೋಷಕರೊಂದಿಗೆ ಸಂವಾದ ನಡೆಸಿದ ಅವರು, ‘ಸರಕಾರಿ ಶಾಲೆಗಳನ್ನು ವಿಲೀನಗೊಳಿಸಿದ್ದರಿಂದ ಈಗ ಈ ಶಾಲೆಯಲ್ಲಿ 430 ವಿದ್ಯಾರ್ಥಿಗಳು ಇದ್ದಾರೆ. ಜತೆಗೆ ಆ ಶಾಲೆಗಳ ಶಿಕ್ಷಕರೂ ಸಂಕೀಘಟ್ಟದ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೀಗಾಗಿ, ಅಡೆತಡೆ ಇಲ್ಲದೆ ಕಲಿಕೆ ಸಾಧ್ಯವಾಗಿದೆ. ವಿಷಯಾಧಾರಿತವಾಗಿ ಬೋಧನೆ ನಡೆಯುತ್ತಿದೆ ಎಂದರು.

ಶಾಲೆಯಲ್ಲಿ ಗಣಿತ,  ವಿಜ್ಞಾನ ಮತ್ತು ಇಂಗ್ಲಿಷ್ ಭಾಷಾ ಲ್ಯಾಬ್ ಗಳಿವೆ. ಜತೆಗೆ ಮಕ್ಕಳನ್ನು ಮನೆ ಬಾಗಿಲಿಗೆ ಹೋಗಿ ಕರೆದುಕೊಂಡು ಮತ್ತು ಬಿಟ್ಟು ಬರಲು ಉಚಿತ ವಾಹನ ವ್ಯವಸ್ಥೆ ಮಾಡಲಾಗಿದೆ. ಇದು ರಾಜ್ಯದಲ್ಲೇ ಇಂತಹ ಮೊಟ್ಟಮೊದಲ ಶಾಲೆಯಾಗಿದ್ದು, ರಾಜ್ಯಕ್ಕೆ ಮಾದರಿಯಾಗಿದೆ ಎಂದು ಅವರು ಬಣ್ಣಿಸಿದರು.

ಶಾಲೆಯನ್ನು ಅಭಿವೃದ್ಧಿಪಡಿಸಲು ಗ್ರಾಮ ಪಂಚಾಯ್ತಿ, ಜಿಲ್ಲಾಡಳಿತ, ಶಾಸಕರು, ಮಹಿಳಾ ಸ್ವಸಹಾಯ ಸಂಘಗಳು, ಸಮಾಜ ಸೇವಾಸಕ್ತರು ಹೀಗೆ ಎಲ್ಲರ ಸಹಕಾರವನ್ನು ಪಡೆಯಲಾಗಿದೆ ಎಂದು ವಿವರಿಸಿದರು. ಇಲ್ಲಿ ವಿದ್ಯಾರ್ಥಿಗಳಿಗೆ  ಬಿಸಿಯೂಟದ ವ್ಯವಸ್ಥೆ ಇದೆ. ಜೊತೆಗೆ, ಆಟದ ಮೈದಾನ, ಶೌಚಾಲಯ ವ್ಯವಸ್ಥೆ ಎಲ್ಲದಕ್ಕೂ ಗಮನ ಕೊಡಲಾಗಿದೆ ಎಂದರು. ವಾಹನದ ನಿರ್ವಹಣೆ ಮಾಡಲು ಮಹಿಳಾ ಸ್ವಸಹಾಯ ಸಂಘಗಳ ನೆರವು ತೆಗೆದುಕೊಳ್ಳುವ ಚಿಂತನೆ ಇದೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಶಾಲೆಗೆ ಗೋಮಾಳಕ್ಕೆ ಸೇರಿದ 5 ಎಕರೆ ಜಮೀನನ್ನು ಹಾಗೂ  ಧನಂಜಯ ಎಂಬುವವರು ನೀಡಲು ಮುಂದಾಗಿರುವ  2 ಎಕರೆ ಜಮೀನನ್ನು  ಮಂಜೂರು ಮಾಡಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.

ಸಂವಾದದಲ್ಲಿ ಭಾಗವಹಿಸಿದ್ದ ಪೋಷಕರು ಕೂಡ ಈ ರೀತಿ ಕಾಲೆ ಅಭಿವೃದ್ಧಿ ಪಡಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಕೂಡ ಸಂತಸ ವ್ಯಕ್ತಪಡಿಸಿ, ಸಚಿವರನ್ನು ಅಭಿನಂದಿಸಿದರು. ಸಂಕೀಘಟ್ಟದಲ್ಲಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿ, ಬರುವ ನವೆಂಬರ್ ನಲ್ಲಿ ಇದರ ಉದ್ಘಾಟನೆ ನಡೆಯಲಿದೆ ಎಂದರು.

ಇದೇ ವೇಳೆ, ಸಚಿವರು ತಮ್ಮ ಹುಟ್ಟೂರು ಚಿಕ್ಕಕಲ್ಯಕ್ಕೆ ಭೇಟಿ ಕೊಟ್ಟು, ರೂ 50 ಕೋಟಿ ವೆಚ್ಚದಲ್ಲಿ ಆಗುತ್ತಿರುವ ಜಿಟಿಟಿಸಿ ನಿರ್ಮಾಣ ಕಾರ್ಯದ ಪ್ರಗತಿಯನ್ನು ಪರಿಶೀಲಿಸಿದರು. ಜನವರಿ ತಿಂಗಳಲ್ಲಿ ಶಂಕುಸ್ಥಾಪನೆಗೊಂಡ ಈ ಕಟ್ಟಡ ಕಾಮಗಾರಿಯನ್ನು ನವೆಂಬರ್ ಹೊತ್ತಿಗೆ ಮುಗಿಸಲಾಗುತ್ತದೆ ಎಂದು ಹೇಳಿದರು.

Related