ಮತದಾನದ ಹಕ್ಕು ಎಲ್ಲರಿಗೂ ದೊರೆಯಬೇಕು: ಮೇಜರ್ ಪಿ.ಮಣಿವಣ್ಣನ್

ಮತದಾನದ ಹಕ್ಕು ಎಲ್ಲರಿಗೂ ದೊರೆಯಬೇಕು: ಮೇಜರ್ ಪಿ.ಮಣಿವಣ್ಣನ್

ತುಮಕೂರು: ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ತಿದ್ದುಪಡಿ ಮಾಡುವ ಸಂದರ್ಭ ಭಾರತೀಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಮತದಾರರ ಪಟ್ಟಿ ವೀಕ್ಷಕರಾದ ಮೇಜರ್ ಮಣಿವಣ್ಣನ್ ಪಿ. ಅವರು ಸೂಚಿಸಿದರು.
ಅವರಿಂದು ಜಿಲ್ಲಾಧಿಕಾರಿಗಳ ನ್ಯಾಯಾಲಯ ಸಭಾಂಗಣದಲ್ಲಿ ಮತದಾರರ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-೨೦೨೪ರ ಸಂಬಂಧ ನಡೆದ ರಾಷ್ಟ್ರೀಯ ಮತ್ತು ರಾಜ್ಯ ರಾಜಕೀಯ ಪಕ್ಷಗಳ ಪದಾಧಿಕಾರಿಗಳ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.
ಎಲ್ಲಾ ಅರ್ಹ ಮತದಾರರಿಗೂ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನದ ಹಕ್ಕು ದೊರೆಯುವಂತೆ ಅವಕಾಶ ಕಲ್ಪಿಸಬೇಕು ಹಾಗೂ ಅನರ್ಹ ಮತದಾರರನ್ನು ಪಟ್ಟಿಯಿಂದ ಆಯೋಗದ ನಿಯಮಾನುಸಾರ ಕೈಬಿಡಬೇಕು. ಈ ನಿಟ್ಟಿನಲ್ಲಿ ಒಬ್ಬ ಮತದಾರರು ಎರಡು ಕಡೆ ನೋಂದಾಯಿತನಾಗಿದ್ದರೆ ಚುನಾವಣಾ ತಂತ್ರಾಂಶದ ಮೂಲಕ ರಾಷ್ಟ್ರ ಮಟ್ಟದಲ್ಲಿ ಪತ್ತೆ ಹಚ್ಚಲು ಸಾಧ್ಯವಿದ್ದು, ಅಂತಹ ಮತದಾರರು ಹಾಗೂ ಜಿಲ್ಲೆಯ ಮತದಾರರ ಪಟ್ಟಿಯಲ್ಲಿ ಎರಡು ಕಡೆ ನೋಂದಾಯಿತವಾಗಿರುವ, ಮೃತ ಹಾಗೂ ವರ್ಗಾವಣೆಗೊಂಡ ಮತದಾರರನ್ನು ಕೈಬಿಟ್ಟು ನಿಖರವಾದ ಮತದಾರರ ಪಟ್ಟಿ ಪರಿಷ್ಕರಿಸುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಲು ಸಲ್ಲಿಸಿರುವ ಅರ್ಜಿಗಳು, ಹೆಸರು, ವಿಳಾಸ ತಿದ್ದುಪಡಿ ಮೊದಲಾದ ಅರ್ಜಿಗಳ ಸ್ಥಿತಿಗತಿ ಪರಿಶೀಲಿಸಿದರು.

ಪ್ರಶಂಸನಾ ಪತ್ರ ನೀಡಲು ಸೂಚನೆ:-

ಮತದಾರರ ಸೇರ್ಪಡೆ, ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯಲ್ಲಿ ಉದ್ದೇಶಿತ ಹೆಸರಿನ ಸೇರ್ಪಡೆಗೆ ಆಕ್ಷೇಪಣೆ/ಹೆಸರು ತೆಗೆದು ಹಾಕುವಿಕೆ, ಮತದಾರರ ನಿವಾಸ ಬದಲಾವಣೆ, ಪ್ರಸ್ತುತ ಮತದಾರರ ನಮೂದುಗಳ ತಿದ್ದುಪಡಿ, ಯಾವುದೇ ತಿದ್ದುಪಡಿ ಇಲ್ಲದೆ ಬದಲಿ ಎಪಿಕ್ ನೀಡುವಿಕೆ, ಮೊದಲಾದ ಚುನಾವಣೆ ಕರ್ತವ್ಯಗಳನ್ನು ನಿರ್ವಹಿಸುವಲ್ಲಿ ಉತ್ತಮ ಕಾರ್ಯ ನಿರ್ವಹಿಸುವ ನೌಕರರನ್ನು ಗುರುತಿಸಿ ಪ್ರಶಂಸನಾ ಪತ್ರ ನೀಡುವಂತೆ ಅವರು ಸೂಚಿಸಿದರು.

ನಾಗರಿಕರಿಗೆ ಕರೆ ಮಾಡಿ ವಿಚಾರಣೆ:-
ಮತದಾರರ ಸಹಾಯವಾಣಿ ೦೮೧೬-೧೯೫೦ಗೆ ಜಿಲ್ಲೆಯ ಸಾರ್ವಜನಿಕರು ಕರೆ ಮಾಡಿ ದಾಖಲಿಸಿರುವ ಮತದಾರರ ಪಟ್ಟಿ ದೂರುಗಳ ಪರಿಶೀಲಿಸಿದ ಅವರು, ಕೊರಟಗೆರೆ ಕ್ಷೇತ್ರದ ಪಾರತಮ್ಮ, ಕುಣಿಗಲ್‌ನ ವೆಂಕಟೇಶ್, ವಿನಯ್ ಸೇರಿದಂತೆ ವಿವಿಧ ಮತದಾರರಿಗೆ ಕರೆ ಮಾಡಿ ಮತದಾರರ ಪಟ್ಟಿಗೆ ಸಂಬAಧಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸಿದರು.
ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್ ಗೌಡ ಮಾತನಾಡಿ, ಮನೆ ವಿಳಾಸದಲ್ಲಿ ವಾಸವಿಲ್ಲದ ಮತದಾರರು, ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿರುವ ಮತದಾರರನ್ನು ಗುರುತಿಸಿ ಪರಿಷ್ಕರಣೆ ನಡೆಸಬೇಕು ಹಾಗೂ ಪಕ್ಷಗಳ ಪರವಾಗಿ ಗುರುತಿಸಿಕೊಂಡು ಚುನಾವಣಾ ಕರ್ತವ್ಯಗಳನ್ನು ನಿರ್ವಹಿಸುತ್ತಿರುವ ಅಧಿಕಾರಿ/ನೌಕರರನ್ನು ವರ್ಗಾವಣೆಗೊಳಿಸುವಂತೆ ಮನವಿ ಮಾಡಿದರು.
ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾಣಾಧಿಕಾರಿ ಕೆ.ಶ್ರೀನಿವಾಸ್ ಮಾತನಾಡಿ, ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಈಗಾಗಲೇ ಹಲವು ಸಭೆಗಳನ್ನು ನಡೆಸಲಾಗಿದೆ. ಜಿಲ್ಲೆಯಲ್ಲಿ ೧೧೨೩೦೬೨ ಪುರುಷ ಮತದಾರರು, ೧೧೩೨೦೧೬ ಮಹಿಳಾ ಮತದಾರರು ಹಾಗೂ ಇತರೆ ೧೦೪ ಸೇರಿದಂತೆ ಒಟ್ಟು ೨೨೫೫೧೮೨ ಮತದಾರರಿದ್ದು, ಇ-ಜನ್ಮ ತಂತ್ರಾಂಶ ಆಧರಿಸಿ ಜಿಲ್ಲೆಯಲ್ಲಿ ಮರಣ ಹೊಂದಿದ ೧,೩೨,೦೦೦ ಮತದಾರರಲ್ಲಿ ಈಗಾಗಲೇ ೧,೦೦,೦೦೦ ಮತದಾರರನ್ನು ಕೈಬಿಟ್ಟಿದ್ದು, ಬಾಕಿ ೩೨,೦೦೦ ಮೃತ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲು ಅಗತ್ಯ ಕ್ರಮವಹಿಸಲಾಗಿದೆ, ಹೊಸ ಎಪಿಕ್ ಕಾರ್ಡ್ಗಳ ಮುದ್ರಣ ಮುಗಿದಿದ್ದು, ಅವುಗಳನ್ನು ರವಾನಿಸಲಾಗುತ್ತಿದೆ ಎಂದ ಅವರು, ಎರಡು ಕಡೆ ಮತದಾರರ ಪಟ್ಟಿಯಲ್ಲಿ ಹೆಸರಿರುವ ಕುಟುಂಬದ ಮನೆಗಳಿಗೆ ಬಿಎಲ್‌ಓಗಳು ಭೇಟಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.
ಪಾಲಿಕೆ ಆಯುಕ್ತೆ ಅಶ್ವಿಜ, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಹಾಲ ಸಿದ್ಧಪ್ಪ ಪೂಜೇರಿ, ತಹಶೀಲ್ದಾರ್ ಸಿದ್ದೇಶ್, ಚುನಾವಣಾ ತಹಶೀಲ್ದಾರ್ ಗೌರಮ್ಮ, ಕೊರಟಗೆರೆ ತಾಲ್ಲೂಕು ಪಂಚಾಯತ್ ಇಒ ಅಪೂರ್ವ ಸಿ. ಅನಂತರಾಮು, ಕಾಂಗ್ರೇಸ್ ಪಕ್ಷದ ಸುಜಾತ, ಟಿ.ಎ.ಮಹೇಶ್, ಕಮ್ಯೂನಿಸ್ಟ್ ಪಕ್ಷದ ಎನ್.ಕೆ.ಸುಬ್ರಮಣ್ಯ ಸೇರಿದಂತೆ ವಿವಿಧ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಪಕ್ಷಗಳ ಪದಾಧಿಕಾಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related