ಬೆಳೆ ಹಾನಿಗೆ ಪರಿಹಾರ ಧನ ನೀಡಲು ಆಗ್ರಹ

ಬೆಳೆ ಹಾನಿಗೆ ಪರಿಹಾರ ಧನ ನೀಡಲು ಆಗ್ರಹ

ಬೈಲಹೊಂಗಲ : ಇಂಚಲ ಗ್ರಾಮಸ್ಥರು ಉದ್ದಿನ ಬೆಳೆ ಹಾನಿಗೆ ಪರಿಹಾರ ಧನ ಕಲ್ಪಿಸಬೇಕು ಎಂದು ಒತ್ತಾಯಿಸಿ ಉಪವಿಭಾಗಾಧಿಕಾರಿ ಶಶಿಧರ ಬಗಲಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ಸಮೀಪದ ಮುರಗೋಡ ಗ್ರಾಮದ ರೈತ ಸಂಪರ್ಕ ಕೇಂದ್ರದಿಂದ ಸಹಾಯಧನದಲ್ಲಿ ರೈತರಿಗೆ ವಿತರಿಸಿರುವ ಉದ್ದಿನ ಬೀಜ ಕಳಪೆ ಮಟ್ಟದ್ದಾಗಿದ್ದು, ಫಸಲು ಬಿಡುವಲ್ಲಿ ಬೆಳೆ ವಿಫಲವಾಗಿದೆ. ಕೂಡಲೇ ಉದ್ದಿನ ಬೆಳೆ ಹಾನಿಯಾದ ರೈತರಿಗೆ ಸೂಕ್ತ ಪರಿಹಾರ ಧನ ನೀಡಬೇಕು ಎಂದು ಮನವಿ ಸಲ್ಲಿಸಿದರು.

ಇಂಚಲ ಗ್ರಾಮದಿಂದ ಉಪವಿಭಾಗಾಧಿಕಾರಿ ಕಚೇರಿಗೆ ಬಂದಿದ್ದ ರೈತರು ತಮ್ಮ ಆಕ್ರೋಶ ಹೊರ ಹಾಕಿದರು. ಕೃಷಿ ಅಧಿಕಾರಿಗಳಾದ ಎ.ಡಿ.ಸವದತ್ತಿ, ಜಂಟಿ ನಿರ್ದೇಶಕರು ಬೆಳಗಾವಿ, ಬಳ್ಳಾರಿ ಎನ್.ಎಸ್.ಸಿ. ವ್ಯವಸ್ಥಾಪಕರು ಬೆಳೆ ವೀಕ್ಷಣೆಗೆ ಬಂದು ಎಲ್ಲಾ ಬೆಳೆಗಳನ್ನು ಬಿತ್ತಿದ ಜಮೀನುಗಳನ್ನು, ಬೇರೆ ಕಂಪನಿ ಬೀಜಗಳನ್ನು ಬಿತ್ತಿದ ಜಮೀನುಗಳನ್ನು ವೀಕ್ಷಣೆ ಮಾಡಿಕೊಂಡು ಹೋಗಿದ್ದಾರೆ.

ಆದರೆ ಇದರ ಬಗ್ಗೆ ಯಾವುದೇ ಕ್ರಮ ಕೈಕೊಂಡಿಲ್ಲ. ಬೆಳೆ ಹಾನಿಯಾದ ರೈತರಿಗೆ ತಕ್ಷಣ ಪರಿಹಾರ ಧನ ನೀಡಿ ರೈತರಿಗೆ ನೆರವಾಗಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಗ್ರಾಮದ ರೈತ, ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆ ಚೇರಮನ್ ಡಿ.ಬಿ.ಮಲ್ಲೂರ ಮಾತನಾಡಿ, ‘ಮುಂಗಾರು ಹಂಗಾಮಿನಲ್ಲಿ ಇಂಚಲ ಗ್ರಾಮದ ರೈತರಿಗೆ ವಿತರಿಸಿರುವ ಉದ್ದಿನ ಬೀಜ ಸಂಪೂರ್ಣ ಕಳಪೆಯಾಗಿದ್ದು, ಫಸಲು ಬಿಡುವುದಕ್ಕಿಂತ ಮೊದಲೇ ಬೆಳೆ ನೆಲಕಚ್ಚಿದೆ ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಮನವಿಗೆ ಸ್ಪಂದಿಸಿ ನೆರವಾಗಬೇಕು ಎಂದರು.

ಈ ಸಂದರ್ಭದಲ್ಲಿ ಗ್ರಾಮದ ರೈತ ಬಸನಾಯ್ಕ ಮಲ್ಲೂರ, ಎಸ್.ಎಂ.ಬೇವಿನಕೊಪ್ಪ, ಸುರೇಶ ಕರಾಡೆ, ಎಸ್.ಎಫ್ ಕಡಕೋಳ, ಶಿವಪ್ಪ ಕಡಕೋಳ, ರೇವಪ್ಪ ಕಡಕೋಳ, ಶಿವಲಿಂಗಪ್ಪ ಬಾಗೇವಾಡಿ, ಶಿವಪುತ್ರಪ್ಪ ಬಾಗೇವಾಡಿ, ಬಸಪ್ಪ ಬಾಗೇವಾಡಿ, ಸೂರ್ಯನಾಯ್ಕ ಮಲ್ಲೂರ, ಶಿವಾನಂದ ಪೂಜಾರ, ಚಂದ್ರನಾಯ್ಕ ಮಲ್ಲೂರ, ಪಾರೀಶ ತಳಗೇರಿ, ರಾಯಪ್ಪ ಗಡೇಕಾರ, ಅನೇಕರು ಇನ್ನಿತರರಿದ್ದರು.

Related