ಜಲಾಶಯದಿಂದ ನೀರು ಹರಿಸಲು ಮನವಿ

ಜಲಾಶಯದಿಂದ ನೀರು ಹರಿಸಲು ಮನವಿ

ಯಾದಗಿರಿ : ಏ. 10ರವರೆಗೆ ನಾರಾಯಣಪುರ ಬಸವಸಾಗರ ಜಲಾಶಯದಿಂದ ನೀರು ಹರಿಸುವಂತೆ ಸಿಎಂ ಯಡಿಯೂರಪ್ಪಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ ಮನವಿ ಮಾಡಿದ್ದಾರೆ.

ಬೆಂಗಳೂರಿನ ವಿಧಾನಸೌಧದಲ್ಲಿ ಮನವಿ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಜಲಾಶಯದ ವ್ಯಾಪ್ತಿಯಲ್ಲಿ ರೈತರು ಶೇಂಗಾ, ಸಜ್ಜಿ, ಗೋವಿನ ಜೋಳ, ಸೂರ್ಯಕಾಂತಿ, ಮೆಣಸಿನಕಾಯಿ ಇತರ ಬೆಳೆಗಳನ್ನು ಬೆಳೆದಿದ್ದು, ಅವುಗಳ ಕಟಾವಿಗೆ ಬರಲು ಸುಮಾರು ಇನ್ನೂ ಒಂದು ತಿಂಗಳ ಕಾಲ ಅವಕಾಶ ಬೇಕಾಗುತ್ತದೆ.

ಆದ್ದರಿಂದ ಈ ಬೆಳೆಗಳಿಗೆ ನೀರಿನ ಅವಶ್ಯಕತೆ ಇದ್ದು, ಹಿಂದಿನ ನೀರಾವರಿ ಸಲಹಾ ಸಮಿತಿ ಮಾರ್ಚ್ 21ರವರೆಗೆ ನೀರು ಹರಿಸಲು ನಿಗದಿಪಡಿಸಲಾಗಿತ್ತು. ಮಾರ್ಚ್ 21ರವರೆಗೆ ನೀರು ಹರಿಸಿ ಮುಂದೆ ನೀರು ಹರಿಸುವುದು ನಿಲ್ಲಿಸಿದರೆ, ರೈತರ ಯಾವುದೇ ಹಿಂಗಾರು ಬೆಳೆಗಳು ಕಟಾವಿಗೆ ಬರುವುದಿಲ್ಲ.

ಇದರಿಂದ ರೈತರಿಗೆ ಕೋಟ್ಯಾಂತರ ರೂಪಾಯಿ ನಷ್ಟ ಅನುಭವಿಸುತ್ತಾರೆ. ಆದ್ದರಿಂದ ಈಗಾಗಲೇ ನೀರಾವರಿ ಸಲಹಾ ಸಮಿತಿ ನಿಗದಿಪಡಿಸಿದ ಮಾರ್ಚ್ 21ರ ಬದಲಿಗೆ ಏಪ್ರಿಲ್ 10ರವರೆಗೆ ನಾರಾಯಣಪೂರ ಬಸವ ಸಾಗರ ಜಲಾಶಯದಿಂದ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ನೀರು ಹರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಬೇಕೆಂದು ಮನವಿ ಮಾಡಿದರು.

Related