ಬೀಜ-ಗೊಬ್ಬರ ಪೂರೈಕೆಗೆ ಆಗ್ರಹ

ಬೀಜ-ಗೊಬ್ಬರ ಪೂರೈಕೆಗೆ ಆಗ್ರಹ

ಧಾರವಾಡ : ಜಿಲ್ಲೆಯ ರೈತರಿಗೆ ಸಕಾಲದಕ್ಕೆ ವಿವಿಧ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆ ಮಾಡುವಂತೆ ಆಗ್ರಹಿಸಿ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ ನೇತೃತ್ವದಲ್ಲಿ ಜನತಾ ದಳದ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು, ಈಗಾಗಲೇ ಜಿಲ್ಲೆಯಲ್ಲಿ ಮುಂಗಾರು ಪೂರ್ವ ಉತ್ತಮ ಮಳೆ ಸುರಿದಿದೆ. ಆದರೆ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜಗಳು ಲಭಿಸುತ್ತಿಲ್ಲ ಎಂದು ಗಂಭೀರ ಆರೋಪ ಮಾಡಿದರು.

ನೇತೃತ್ವವಹಿಸಿದ್ದ ಮಾಜಿ ಶಾಸಕ ಎನ್.ಎಚ್. ಕೋನರೆಡ್ಡಿ, ಜಿಲ್ಲೆಯಲ್ಲಿ ಉತ್ತಮ ಮುಂಗಾರು ಮಳೆ ಮುನ್ಸೂಚನೆ ನೀಡಿದೆ. ಆದರೆ ನಮ್ಮ ರೈತರಿಗೆ ಬಿತ್ತನೆಗೆ ಬೇಕಾದ ಗುಣಮ್ಟದ ಹೆಸರು, ಶೇಂಗಾ, ಸೂರ್ಯಕಾಂತಿ, ತೊಗರಿ, ಮೆಕ್ಕೆಜೋಳ, ಉದ್ದು ಇತ್ಯಾದಿ ಬೀಜಗಳ ಕೊರತೆ ಎದುರಾಗಿದೆ ಎಂದು ಆಪಾದಿಸಿದರು.

ರೈತರು ಇದೀಗ ಬಿತ್ತನೆಗೆ ಸಜ್ಜಾಗಿದ್ದು, ಪ್ರತಿ ತಾಲೂಕಿಗೆ 1000 ಕ್ವಿಂಟಲ್ ಬೀಜಗಳ ಅಗತ್ಯವಿದೆ. ಹೆಸರು ಹಾಗೂ ಶೇಂಗಾ ಬೀಜಕ್ಕೆ ಹೆಚ್ಚಿನ ಬೇಡಿಕೆ ಇದೆ. ಬೀಜಗಳನ್ನು ಸರ್ಕಾರ ಕೃಷಿ ವಿಶ್ವವಿದ್ಯಾಲಯಗಳ ಬೀಜ ಘಟಕದಿಂದ ಸಿಗುವಂತೆ ವ್ಯವಸ್ಥೆ ಮಾಡಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ಮನವಿ ಮಾಡಿದರು.

Related