ಮದ್ಯ ಮುಕ್ತ ತಾಲೂಕು ಮಾಡಲು ಮನವಿ

  • In State
  • February 29, 2020
  • 404 Views
ಮದ್ಯ ಮುಕ್ತ ತಾಲೂಕು ಮಾಡಲು ಮನವಿ

ಹುಬ್ಬಳ್ಳಿ, ಫೆ. 29: ಹುಬ್ಬಳ್ಳಿಯನ್ನು ಮದ್ಯ ಮುಕ್ತ ತಾಲೂಕು ಮಾಡಬೇಕೆಂದು ಆಗ್ರಹಿಸಿ ರೈತರು ನಗರದಲ್ಲಿ ಪ್ರತಿಭಟನೆ ನಡೆಸಿ ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹುಬ್ಬಳ್ಳಿ ತಾಲೂಕು ಘಟಕದ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಸಂಗೊಳ್ಳಿ ರಾಯಣ್ಣ ವೃತ್ತದಿಂದ ಮೆರವಣಿಗೆಯಲ್ಲಿ ಬಂದು ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.

ಸಂಘಟನೆಯ ಉತ್ತರ ಕರ್ನಾಟಕ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಮಾತನಾಡಿ, ಸ್ವಾಮಿನಾಥನ್ ವರದಿ ಜಾರಿಗೆ ತಂದರೆ ಮಾತ್ರ ರೈತರು ಮುಂದುವರೆಯಲು ಸಾಧ್ಯ. ಮುಂಬರುವ ರಾಜ್ಯ ಬಜೆಟ್‌ನಲ್ಲಿ ರೈತರ ಸಂಪೂರ್ಣ ಸಾಲ ಮನ್ನಾ ಮಾಡಬೇಕು. ತಾಲೂಕಿನ ನೂಲ್ವಿಯಲ್ಲಿ ಕಿರಾಣಿ ಅಂಗಡಿಯಲ್ಲಿ ರಾಗಿ-ಜೋಳ ಮಾರಾಟ ಮಾಡಿದಂತೆ ಮುಕ್ತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ. ತಾಲೂಕು ಆಡಳಿತ ತಕ್ಷಣ ಕ್ರಮ ಜರುಗಿಸಬೇಕು ಎಂದು ಹೇಳಿದರು. ಅತಿವೃಷ್ಟಿಯಿಂದ ಬಿದ್ದ ಮನೆಗಳಿಗೆ ಸಂಪೂರ್ಣ ಪರಿಹಾರ ಸಿಕ್ಕಿಲ್ಲ. ಬಹಳಷ್ಟು ಪ್ರಕರಣಗಳಲ್ಲಿ ಬಿಡುಗಡೆಯಾದ ಪರಿಹಾರ ಹಣ ಬ್ಯಾಂಕ್ ಸಾಲಕ್ಕೆ ಜಮಾ ಮಾಡಿಕೊಳ್ಳಲಾಗಿದೆ. ಇದು ಸರಿಯಲ್ಲ ಎಂದರು. ಜಿಲ್ಲಾಧ್ಯಕ್ಷ ಕಲ್ಮೇಶ ಲಿಗಾಡಿ, ಚಂದ್ರಶೇಖರ ಕಬ್ಬೂರ, ಮಂಜುನಾಥ ಕಾಲವಾಡ, ರಮೇಶ ಕಿತ್ತೂರ, ಶಂಕ್ರಪ್ಪ ಸಂಗಳದ, ಇತರರು ಇದ್ದರು.

 

 

Related