ಭಾರತೀಯ ಯೋಧರ ಬಿಡುಗಡೆ

ಭಾರತೀಯ ಯೋಧರ ಬಿಡುಗಡೆ

ನವದೆಹಲಿ : ಈಶಾನ್ಯ ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಭಾರತ ಮತ್ತು ಚೀನಾ ನಡುವಿನ ಸಂಘರ್ಷದ ನಂತರ, ಭಾರತದ ಸೇನೆಯ ಇಬ್ಬರು ಮೇಜರ್ ಸೇರಿದಂತೆ ಹತ್ತು ಮಂದಿ ಯೋಧರನ್ನು ಚೀನಾ ಬಿಡುಗಡೆಗೊಳಿಸಿದೆ ಎಂದು ವರದಿಯಾಗಿದೆ. ಘರ್ಷಣೆಯ ನಂತರ ಎರಡೂ ದೇಶಗಳ ನಡುವೆ ಮಾತುಕತೆ ನಡೆದ ನಂತರ ಶುಕ್ರವಾರ ರಾತ್ರಿಯ ವೇಳೆ ಈ ಬೆಳವಣಿಗೆ ನಡೆದಿರುವುದಾಗಿ ಹೇಳಲಾಗಿದೆ.

ಸಂಘರ್ಷದ ವೇಳೆ ಯಾವುದೇ ಭಾರತೀಯ ಯೋಧರು ನಾಪತ್ತೆಯಾಗಿಲ್ಲ ಎಂದು ಸೇನೆ ಹೇಳಿಕೆ ನೀಡಿತ್ತು. ಆದರೆ ಈ ಬಗ್ಗೆ ಹೆಚ್ಚಿನ ವಿವರಗಳನ್ನು ಸೇನೆ ನೀಡಿರಲಿಲ್ಲ. ಈ ನಡುವೆಯೇ ಯೋಧರ ಬಿಡುಗಡೆಯ ಕುರಿತು ವರದಿಯಾಗಿದೆ. ಆದರೆ ಅಧಿಕಾರಿಗಳ ಅಧಿಕೃತ ಹೇಳಿಕೆ ಇನ್ನೂ ಹೊರಬಂದಿಲ್ಲ.
ಈಗ ಬಂದಿರುವ ವರದಿಗಳ ಅನ್ವಯ, ಭಾರತೀಯ ಸೇನೆ ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ ಮೇಜರ್ ಜನರಲ್ ಶ್ರೇಣಿಯ ಅಧಿಕಾರಿಗಳ ಮಾತುಕತೆಯ ನಂತರ ಇಂಥದ್ದೊAದು ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಮತ್ತೊಂದು ವರದಿಯ ಪ್ರಕಾರ, ಸೋಮವಾರ ನಡೆದ ಘರ್ಷಣೆಯಲ್ಲಿ 76 ಭಾರತೀಯ ಸೈನಿಕರು ಗಾಯಗೊಂಡಿದ್ದರು. ಅದರಲ್ಲಿ 18 ಮಂದಿಗೆ ಗಂಭೀರ ಗಾಯಗಳಾಗಿದ್ದು, 58 ಯೋಧರಿಗೆ ಅಲ್ಪ ಗಾಯಗಳಾಗಿವೆ. 18 ಯೋಧರು ಲೇಹ್‌ನಲ್ಲಿರುವ ಆಸ್ಪತ್ರೆಯಲ್ಲಿ ಹಾಗೂ ಉಳಿದವರಿಗೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Related