ಪೌರಕಾರ್ಮಿಕರ ನೇಮಕಾತಿ ಐತಿಹಾಸಿಕ ತೀರ್ಮಾನ: ಸಿಎಂ

ಪೌರಕಾರ್ಮಿಕರ ನೇಮಕಾತಿ ಐತಿಹಾಸಿಕ ತೀರ್ಮಾನ: ಸಿಎಂ

ಬೆಂಗಳೂರು, ಜುಲೈ 05 : ಪೌರಕಾರ್ಮಿಕರನ್ನು ನೇಮಕಾತಿಯು ಐತಿಹಾಸಿಕ ತೀರ್ಮಾನವಾಗಿದ್ದು ಬೇರೆ ಯಾವ ರಾಜ್ಯದಲ್ಲಿಯೂ ಇದು ಆಗಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ಸರ್ಕಾರದ ನಿರ್ಣಯವನ್ನು ಪೌರಕಾರ್ಮಿಕರು ಹೃದಯಪೂರ್ವಕವಾಗಿ ಸ್ವಾಗತಿಸಿದ್ದು ಕೆಲಸಕ್ಕೆ ಹಾಜರಾಗುತ್ತಿದ್ದಾರೆ.

ಪೌರಕಾರ್ಮಿಕರ ವಿಶೇಷ ನೇಮಕಾತಿ ಸಲುವಾಗಿ ಸಮಿತಿ ರಚಿಸಲಾಗುತ್ತಿದ್ದು, ಸಮಿತಿಯಲ್ಲಿ ಕಾರ್ಮಿಕ ಮುಖಂಡರು, ನಿಗಮದ ಅಧ್ಯಕ್ಷರು, ಪದಾಧಿಕಾರಿಗಳು, ಕಾನೂನು ಇಲಾಖೆ ಅಧಿಕಾರಿಗಳು ಇರಲಿದ್ದು, ನೇರವಾಗಿ ಹಣ ಪಾವತಿ ಆಗಿದ್ದರೂ, ಖಾಯಂ ಆಗದೆ ಸವಲತ್ತುಗಳು ದೊರಕದವರಿಗೆ ಅನುಮೋದನೆ ಪಡೆದು ನೀಡಲು ತೀರ್ಮಾನಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ ಹಾಗೂ ಸಹಕಾರ ನೀಡುವುದಾಗಿ ಹೇಳಿದ್ದಾರೆ ಎಂದರು.


ಅತ್ಯಂತ ಕೆಟ್ಟ ಸ್ಥಿತಿಯಲ್ಲಿ ಪೌರ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅವರ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಆಯವ್ಯಯದಲ್ಲಿ ಎರಡು ಸಾವಿರ ರೂ.ಗಳ ಸಂಕಷ್ಟ ಪರಿಹಾರ ನೀಡಲಾಗಿದೆ. ಖಾಯಂ ಆದರೆ ಬದುಕು ಚೆನ್ನಾಗಿ ಆಗುತ್ತದೆ ಎನ್ನುವ ನಂಬಿಕೆ ಅವರ ಮನಸ್ಸಿನಲ್ಲಿ ಇತ್ತು ಹಾಗಾಗಿ ಅವರ ಬಹುದಿನಗಳ ಬೇಡಿಕೆಯನ್ನು ಈಡೇರಿಸಲಾಗಿದೆ. ಖಾಯಂಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದರು.

ಭಾರಿ ಮಳೆ: ಸೂಕ್ತ ಕ್ರಮ ಮತ್ತು ಪರಿಹಾರಕ್ಕೆ ಸೂಚನೆ:

ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯೇ ಸಂಬಂಧಪಟ್ಟ ಪ್ರಕೃತಿ ವಿಕೋಪ ತಂಡದ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಉಸ್ತುವಾರಿ ಕಾರ್ಯದರ್ಶಿಗಳಿಗೆ ಸ್ಥಳಕ್ಕೆ ಭೇಟಿ ನೀಡಲು ಸೂಚಿಸಲಾಗಿದೆ. ಕರಾವಳಿ ಭಾಗದಲ್ಲಿ ಕಡಲು ಕೊರೆತ ಉಂಟಾಗಿದ್ದು, ಕೆಲವು ಮನೆಗಳಿಗೆ ಹಾನಿಯಾಗಿದೆ. ಪರಿಶೀಲನೆ ಮಾಡಿ ಕೂಡಲೆ ಪರಿಹಾರ ನೀಡಬೇಕೆಂದು ಸೂಚನೆ ನೀಡಲಾಗಿದೆ. ಇಂದೂ ಕೂಡ ಕೊಡಗು ಸೇರದಂತೆ ಸಂಬಂಧಿಸಿದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿ ಪರಿಹಾರ ನೀಡಲು ಎಲ್ಲಾ ವ್ಯವಸ್ಥೆ ಮಾಡಲು ಸೂಚಿಸಿದ್ದೇನೆ ಎಂದರು.

Related