ಸುಧಾಮೂರ್ತಿ ಮಾತೃ ಹೃದಯಿ…

ಸುಧಾಮೂರ್ತಿ ಮಾತೃ ಹೃದಯಿ…

ಬೆಂಗಳೂರು, ಮಾ. 13 : ಪ್ರವಾಹ ದಿಂದ ಉತ್ತರ ಕರ್ನಾಟಕದಲ್ಲಿ ಜನರು ತತ್ತರಿಸಿ ಹೋದಾಗ, ಸುಧಾಮೂರ್ತಿ ತಾವೇ ಮುಂದು ನಿಂತು ಪರಿಹಾರಕ್ಕೆ ಸಹಾಯ ಮಾಡಿದರು. ಈಗ ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೂ ಕೈ ಜೋಡಿಸಿದ್ದಾರೆ. ಸುಧಾಮೂರ್ತಿ ಅವರ ಕಾಳಜಿಯ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷ ಸಚಿವ ಎಸ್. ಸುರೇಶ್ ಕುಮಾರ್ ತಮ್ಮ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ವಿಶ್ವಾದ್ಯಂತ ಕೊರೊನಾ ವೈರಸ್ಗೆ ಜನರು ತತ್ತರಿಸಿ ಹೋಗುತ್ತಿದ್ದಾರೆ. ಈಗಾಗಲೇ ಕರ್ನಾಟಕದಲ್ಲಿ ಈ ಸೋಂಕಿನಿಂದ ವೃದ್ಧನೊಬ್ಬ ಮೃತಪಟ್ಟಿರುವುದು ದೃಢವಾಗಿದೆ. ಇದೀಗ ಕೊರೊನಾ ವೈರಸ್ ಚಿಕಿತ್ಸೆಗೆ ತಮ್ಮ ಕೈಲಾದ ಸಹಾಯ ಮಾಡಲು ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರು ಮುಂದಾಗಿದ್ದಾರೆ.
ಪೋಸ್ಟ್ನಲ್ಲಿ ಏನಿದೆ? : “ನಿನ್ನೆ ಬೆಳಗ್ಗೆ ನನಗೆ ಇನ್ಫೋಸಿಸ್ ಫೌಂಡೇಶನ್ ಕಛೇರಿಯಿಂದ ಕರೆ ಬಂದಿತ್ತು. ಸುಧಾಮೂರ್ತಿ ಅವರು ಮಾತನಾಡಿ ದೇಶ-ವಿದೇಶಗಳಲ್ಲಿ ಆತಂಕ ತಂದಿರುವ ಕೊರೊನಾ ವೈರಸ್ ವ್ಯಾಪಕವಾಗಿ ಹರಡದಂತೆ ನಮ್ಮ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು. ಒಂದು ಆಸ್ಪತ್ರೆಯನ್ನು ತಮಗೆ ವಹಿಸಿದರೆ ಅದನ್ನು ಕೊರೊನಾ ವೈರಸ್ ಚಿಕಿತ್ಸೆಗಾಗಿ ತಮ್ಮ ಸಂಸ್ಥೆಯ ವೆಚ್ಚದಲ್ಲಿ ಪೂರ್ಣಪ್ರಮಾಣದಲ್ಲಿ ಸಜ್ಜುಗೊಳಿಸುವುದಾಗಿ, ಅಗತ್ಯ ಉಪಕರಣಗಳನ್ನೂ ಒದಗಿಸುವುದಾಗಿ ಹೇಳಿದರು” ಎಂದರು. ಅಷ್ಟೇ ಅಲ್ಲ, ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲುರೊಂದಿಗೂ ತಮ್ಮ ಈ ಪಾತ್ರದ ಕುರಿತು ಚರ್ಚಿಸಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದಾರೆ. ಸದ್ಯದಲ್ಲಿಯೇ ಈ ಕುರಿತು ಉನ್ನತಮಟ್ಟದ ಸಭೆ ನಡೆಯಲಿದೆ ಎಂದು ತಿಳಿಸಿದರು.

Related