ಅತ್ಯಾಚಾರ ಎಸಗಿ ಕೊಲೆ

ಅತ್ಯಾಚಾರ ಎಸಗಿ ಕೊಲೆ

ಚಿತ್ರದುರ್ಗ, ಫೆ. 16 : ಪ್ರೀತಿಸಿದ ಅಪ್ರಾಪ್ತೆಯನ್ನು ಕೊಲೆಗೈದು ಅಪ್ರಾಪ್ತ ಯುವಕ ಪ್ರೇಮಿಗಳ ದಿನದಂದೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಜಿಲ್ಲೆಯಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ಚಿತ್ರದುರ್ಗ ತಾಲೂಕಿನ ಜಾನಕೊಂಡ ಸಮೀಪದ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಅಪ್ರಾಪ್ತ ಯುವಕ ಹಾಗೂ ಯುವತಿ ಕಳೆದ ಎರಡು ವರ್ಷಗಳಿಂದ ಪ್ರೀತಿಸುತಿದ್ದರು. ಪ್ರೀತಿಯ ವಿಚಾರ ಪೋಷಕರಿಗೆ ಗೊತ್ತಾಗಿದೆ. ಇಬ್ಬರ ಮನೆಯಲ್ಲೂ ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದು, ಮದುವೆಗೆ ಒಪ್ಪಿಗೆ ಸೂಚಿಸಿರಲಿಲ್ಲ. ಅಪ್ರಾಪ್ತ ಪಾಗಲ್ ಪ್ರೇಮಿ ಪ್ರಿಯತಮೆಯನ್ನು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಯುವಕ ಜನವರಿ 27 ರಂದು ಪ್ರಿಯತಮೆಯನ್ನು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದನು. ಅಲ್ಲಿ ಆಕೆಯನ್ನು ಬರ್ಬರವಾಗಿ ಹತ್ಯೆಗೈದು ಗಂಜಿಗಟ್ಟೆಯ ಗುಡ್ಡದ ಕೆಳಗೆ ಮೃತದೇಹವನ್ನು ಬಚ್ಚಿಟ್ಟು ಗ್ರಾಮಕ್ಕೆ ವಾಪಸ್ ಆಗಿದ್ದನು. ಕೊಲೆ ಮಾಡಿ 20 ದಿನಗಳು ಕಳೆದಿದ್ದು, ಆಕೆಯ ನೆನಪಲ್ಲಿ ಪ್ರೇಮಿಗಳ ದಿನಾಚರಣೆಯಂದೇ ಯುವಕ ಸಹ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ಕುಟುಂಬದವರು ಯುವಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ, ಸದ್ಯಕ್ಕೆ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಸಂಬಂಧ ಮಹಿಳಾ ಠಾಣೆಯಲ್ಲಿ ಅಪ್ರಾಪ್ತ ಯುವತಿ ಕಾಣೆಯಾಗಿರುವ ಬಗ್ಗೆ ಸಹ ದೂರು ದಾಖಲಾಗಿತ್ತು. ಆತ್ಮಹತ್ಯೆ ಯತ್ನಕ್ಕೂ ಮುನ್ನ ತನ್ನ ಪೋಷಕರ ಬಳಿ ಪ್ರೇಯಸಿಯನ್ನು ಕೊಲೆ ಮಾಡಿರುವ ವಿಚಾರವನ್ನು ತಿಳಿಸಿದ್ದಾನೆ.

ಘಟನಾ ಸ್ಥಳಕ್ಕೆ ಚಿತ್ರದುರ್ಗ ಗ್ರಾಮಾಂತರ ಹಾಗೂ ಮಹಿಳಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇಹವು ಸಂಪೂರ್ಣ ಕೊಳೆತು ಹೋಗಿದೆ. ಕೊಲೆಗೂ ಮುನ್ನ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮಾಂತರ ಠಾಣಾ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

Related