ಜನ, ಜಾನುವಾರು ರಕ್ಷಿಸಿ

ಜನ, ಜಾನುವಾರು  ರಕ್ಷಿಸಿ

ರಾಮದುರ್ಗ : ಮಲಪ್ರಭಾ ನದಿಗೆ ಎದುರಾಗಿರುವ ಪ್ರವಾಹದಲ್ಲಿ ಸಿಲುಕಿರುವ ಜನ ಮತ್ತು ಜಾನುವಾರುಗಳನ್ನು ರಕ್ಷಣೆ ಮಾಡಲು ತಾಲ್ಲೂಕು ಆಡಳಿತ ಮುಂದಾಗಬೇಕು ಎಂದು ಶಾಸಕ ಮಹಾದೇವಪ್ಪ ಯಾದವಾಡ ಅಧಿಕಾರಿಗಳಿಗೆ ಸೂಚನೆ ನೀಡಿದರು.

ತಾ.ಪಂ ಸಭಾ ಭವನದಲ್ಲಿ ನೆರೆ ನಿರ್ವಹಣೆ ಕುರಿತು ಜರುಗಿದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಪ್ರವಾಹ ಮುಗಿಯುವ ತನಕ ಅಧಿಕಾರಿಗಳು ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ತಾಕೀತು ಮಾಡಿದರು.

ಕಳೆದ ವರ್ಷ ಪ್ರವಾಹದಿಂದ ಉಂಟಾದ ಬೆಳೆ ಹಾನಿ ಸಮೀಕ್ಷೆಯನ್ನು ಅಧಿಕಾರಿಗಳು ತಪ್ಪುತಪ್ಪಾಗಿ ಮಾಡಿದ್ದಾರೆ. ಇದರಿಂದ ನೊಂದ ಜನಕ್ಕೆ ಅನ್ಯಾಯವಾಗಿದೆ. ಅಧಿಕಾರಿಗಳು ನಿರಾಶ್ರಿತರಿಗೆ ಅನ್ಯಾಯ ಮಾಡಬಾರದು. ಈ ಬಾರಿಯಾದರೂ ಸಮೀಕ್ಷೆ ಚುರುಕಾಗಿ ನಡೆಸಬೇಕು ಎಂದು ಹೇಳಿದರು.

ಕೃಷಿ ಸಹಾಯಕ ನಿರ್ದೇಶಕ ಎಸ್.ಎಫ್. ಬೆಳವಟಗಿ ಮಾತನಾಡಿ, ಕಳೆದ ವರ್ಷದಲ್ಲಿ ಸಮೀಕ್ಷೆ ಮಾಡಲು ಅಧಿಕಾರಿಗಳ ತಂಡ ಸಾಕಷ್ಟು ತೊಂದರೆ ಅನುಭವಿಸಿದೆ. ಕೆಲಸ ಮಾಡುವ ಅಧಿಕಾರಿಗಳಿಗೆ ಸಭೆಯಲ್ಲಿ ನಿಂದಿಸುವುದರಿಂದ ನೋವುಂಟಾಗುತ್ತದೆ ಎಂದು ಹೇಳಿದರು.

ತಾಲೂಕಿನಲ್ಲಿ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಎದುರಿಸಲು ತಾಲ್ಲೂಕು ಆಡಳಿತ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ. ಬೆಳೆ ಮತ್ತು ಮನೆ ಹಾನಿ ಸಮೀಕ್ಷೆಯನ್ನು ತಪ್ಪಿಲ್ಲದಂತೆ ನಡೆಸಲಾಗುವುದು ಎಂದು ತಹಶೀಲ್ದಾರ ಗಿರೀಶ ಸ್ವಾದಿ ಹೇಳಿದರು.

Related