ಪ್ರತಾಪ್‌ ಸಿಂಹ ಮಾತಿಗೆ ಸಚಿವರ ಎದುರೇಟು

ಪ್ರತಾಪ್‌ ಸಿಂಹ ಮಾತಿಗೆ ಸಚಿವರ ಎದುರೇಟು

ಬೆಂಗಳೂರು: ನಾನು ಬಿ ಎಲ್ ಸಂತೋಷ್ ಅವರ ಬಗ್ಗೆ ಮಾತನಾಡಿದ ತಕ್ಷಣ ಅದು ಇಡೀ ಬ್ರಾಹ್ಮಣ ಸಮುದಾಯವನ್ನು ಬೈದಂತಲ್ಲ. ನನ್ನ ಮತ್ತು ಬ್ರಾಹ್ಮಣರ ನಡುವಿನ ಸಂಬಂಧ ಎಷ್ಟೊಂದು ಮಧುರವಾಗಿದೆ ಎನ್ನುವುದನ್ನು ಒಮ್ಮೆ ವಿಜಯಪುರಕ್ಕೆ ಬಂದು ನೋಡಲಿ. ಪ್ರತಾಪ್‌ ಸಿಂಹ ಅವರು ದಿನವೂ ನನ್ನ ವಿರುದ್ಧ ವೈಯಕ್ತಿಕವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ಅವರ ಮನಃಸ್ಥಿತಿ ತುಂಬಾ ಚಿಂತಾಜನಕವಾಗಿರುವಂತಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್‌ ತಿರುಗೇಟು ನೀಡಿದ್ದಾರೆ.

ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಿಂದೆ ಬಿಜೆಪಿಯ ಅನಂತ ಕುಮಾರ್ ಅವರು ಕೇಂದ್ರದಲ್ಲಿ ಮಂತ್ರಿಗಳಾಗಿದ್ದರು. ಆಗ ನಾನು ರಾಜ್ಯದಲ್ಲಿ ನೀರಾವರಿ ಸಚಿವನಾಗಿದ್ದೆ. ನಮ್ಮ ರಾಜ್ಯದ ಕೆಲಸಗಳ ಮೇಲೆ ಹೋದಾಗ ಅವರು ಪಕ್ಷದ ಮಿತಿಯನ್ನು ಮೀರಿ, ಕರ್ನಾಟಕದ ಹಿತವನ್ನು ಕಾಯುತ್ತಿದ್ದರು. ನಮ್ಮನ್ನು ಎಲ್ಲಾ ಸಚಿವರು ಮತ್ತು ಅಧಿಕಾರಿಗಳ ಬಳಿಗೆ ಕೊಂಡೊಯ್ಯುತ್ತಿದ್ದರು. ಪ್ರತಾಪ್‌ ಥರದವರು ಅಂಥವರಿಂದ ಕಲಿಯಬೇಕಾಗಿದೆ. ಆದರೆ, ಬಿಜೆಪಿಯವರಿಗೆ ಈಗ ಅನಂತಕುಮಾರ್ ಅವರ ನೆನಪೂ ಇಲ್ಲ ಎಂದರು.

ನಮ್ಮ ಬಿಎಲ್‌ಡಿಇ ಸಂಸ್ಥೆಯಿಂದ ದಾಸಸಾಹಿತ್ಯದ ಸಮಗ್ರ ಸಂಪುಟ ತರುತ್ತಿದ್ದೇವೆ. ಬ್ರಾಹ್ಮಣರಾದ ಕೃಷ್ಣ ಕೊಲ್ಹಾರ ಕುಲಕರ್ಣಿಯವರ ಸಂಪಾದಕತ್ವದಲ್ಲಿ ಆದಿಲ್‌ಶಾಹಿ ಸಂಪುಟಗಳನ್ನು ತಂದೆವು. ಹಾಗೆಯೇ ನಮ್ಮ ಸಂಸ್ಥೆಯಲ್ಲಿ ಸಾಕಷ್ಟು ಬ್ರಾಹ್ಮಣರಿದ್ದಾರೆ. ನನಗೆ ಚಿಕ್ಕಂದಿನಲ್ಲಿ ಪಾಠ ಕಲಿಸಿದ ದೇಶಪಾಂಡೆ, ಹಣಮಂತರಾವ್‌ ಅವರೆಲ್ಲ ಬ್ರಾಹ್ಮಣರೇ ಆಗಿದ್ದರು. 1998ರಲ್ಲಿ ನಾನು ಲೋಕಸಭೆ ಚುನಾವಣೆಗೆ ನಿಂತು ಗೆದ್ದಾಗ ವಿಜಯಪುರ ಕ್ಷೇತ್ರದ ಒಂದು ಲಕ್ಷಕ್ಕಿಂತಲೂ ಹೆಚ್ಚು ಬ್ರಾಹ್ಮಣ ಮತದಾರರ ಪೈಕಿ ಶೇಕಡ 90ರಷ್ಟು ಜನ ನನಗೆ ಮತ ಚಲಾಯಿಸಿದ್ದರು” ಎಂದು ಅವರು ಉತ್ತರಿಸಿದರು.

 

Related