ಬಿಟಿಎಂ ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ: ಶ್ರೀಧರ್ ರೆಡ್ಡಿ

ಬಿಟಿಎಂ ಕ್ಷೇತ್ರದ ಜನ ಬದಲಾವಣೆ ಬಯಸಿದ್ದಾರೆ: ಶ್ರೀಧರ್ ರೆಡ್ಡಿ

ಬೆಂಗಳೂರು : ಬಿಟಿಎಂ ವಿಧಾನಸಭಾ ಕ್ಷೇತ್ರದಲ್ಲಿ ಹತ್ತು ಹಲವು ಯೋಜನೆಗಳನ್ನು ರೂಪಿಸಿ ಕರ‍್ಯಗತಗೊಳಿಸಲು ನಾನು ಸಕಲ ಸಿದ್ದತೆಯನ್ನು ಮಾಡಿಕೊಂಡಿದ್ದೇನೆಂದು ಬಿಜೆಪಿ ಅಭ್ಯರ್ಥಿ ಕೆ.ಆರ್. ಶ್ರೀಧರ್ ರೆಡ್ಡಿ ನುಡಿದರು.

ಇಂದು ಕ್ಷೇತ್ರದ ಹಲವೆಡೆ ಬಿಟಿಎಂ ಬಡಾವಣೆ, ಎನ್.ಎಸ್. ಪಾಳ್ಯ, ಕೋರಮಂಗಲ, ಆಡುಗೋಡಿ, 8ನೇ ಬ್ಲಾಕ್‌ಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಶ್ರೀಧರ್ ರೆಡ್ಡಿಯವರು, ಜನ ಬದಲಾವಣೆ ಬಯಸಿದ್ದಾರೆ. ಜನರ ಸಮಸ್ಯೆಗಳು ಇನ್ನೂ ಜೀವಂತವಾಗಿದೆ. ಈ ಬಾರಿ ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿಯೂ ಸಹ ಮತ್ತೊಮ್ಮೆ ಡಬಲ್ ಇಂಜಿನ್ ಸರ್ಕಾರ ಬರಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದರು.

ರಾಷ್ಟ್ರೀಯ ಬಿಜೆಪಿ ಪ್ರಧಾನ ಕರ‍್ಯದರ್ಶಿ ಸಂತೋಷ್ ಜೀಯವರು ಕ್ಷೇತ್ರಕ್ಕೆ ಆಗಮಿಸಿ ಬಿಜೆಪಿ ಕಛೇರಿಯನ್ನು ಉದ್ಘಾಟಿಸಿದರು. ಅಮಿತ್ ಶಾ, ಕಿಶನ್ ರೆಡ್ಡಿಯವರು ಕ್ಷೇತ್ರಕ್ಕೆ ಬಂದು ಹೋದ ನಂತರ ಬಿಜೆಪಿ ಕರ‍್ಯಕರ್ತರಲ್ಲಿ ಹುಮ್ಮಸ್ಸು ದುಪ್ಪಟ್ಟಾಗಿದೆ. ನಮಗೆ ಗೆದ್ದೇ ಗೆಲ್ಲುತ್ತೇವೆಂಬ ವಿಶ್ವಾಸ ಮೂಡಿದೆ. ನಾನು ಕ್ಷೇತ್ರದಾದ್ಯಂತ ಮತ ಯಾಚನೆ ಮಾಡುವ ವೇಳೆ, ಜನತೆ ಈ ಭಾರಿ ಬಿಜೆಪಿಗೆ ಮತ ನೀಡುತ್ತೇವೆಂದು ಹರಸುತ್ತಿದ್ದಾರೆ. ಈಗಿರುವ ಶಾಸಕರಿಗೆ ವಯಸ್ಸಾಗಿರುವುದರಿಂದ ಅವರು ಜನ ಸಂಪರ್ಕ ಮಾಡಲು ಆಗುತ್ತಿಲ್ಲ. ನರೇಂದ್ರ ಮೋದಿಯವರು ದೇಶದ ಅಭಿವೃದ್ದಿಗೆ ಹೆಚ್ಚು ಶ್ರಮವಹಿಸುತ್ತಿದ್ದಾರೆ. ಅವರ ಹಿತಕರ ಆಲೋಚನೆಯೇ ನಾವೆಲ್ಲರೂ ಬಿಜೆಪಿಗೆ ಮತ ನೀಡಲು ಸ್ಪೂರ್ತಿ ಎಂದು ಕ್ಷೇತ್ರದ ಜನತೆ ನುಡಿಯುತ್ತಿದ್ದಾರೆಂದರು.

ಬಿಜೆಪಿ ಪಕ್ಷದ ಪದಾಧಿಕಾರಿಗಳು, ಕರ‍್ಯಕರ್ತರು, ಬೂತ್ ಅಧ್ಯಕ್ಷರು ನನ್ನ ಬೆನ್ನೆಲುಬಾಗಿ ನಿಂತು ಪ್ರತಿ ದಿನ ಮತದಾರರ ಮನೆ ಬಾಗಿಲಿಗೆ ತೆರಳಿ, ಬಿಜೆಪಿ ಪಕ್ಷದ ಯೋಜನೆಗಳನ್ನು ತಿಳಿಸಿ, ಮತ್ತೊಮ್ಮೆ ಬಿಜೆಪಿಗೆ ಮತ ನೀಡುವಂತೆ ಓಲೈಸುತ್ತಿದ್ದಾರೆಂದರು. ಇನ್ನೆರಡು ದಿನ ಪ್ರಚಾರ ಬಾಕಿ ಉಳಿದಿದ್ದು, ಅಣ್ಣಾಮಲೈರವರು ಸಹ ಕ್ಷೇತ್ರಕ್ಕೆ ಬಂದು ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆಂದು ನುಡಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ಮುಖಂಡ ಸುದರ್ಶನ್, 2008 ರಲ್ಲಿಯೇ ಬಿಜೆಪಿ, ಕ್ಷೇತ್ರದಲ್ಲಿ ಗೆಲ್ಲಬೇಕಿತ್ತು. ಆದರೆ, ಕಾಂಗ್ರೆಸ್‌ನವರು ಅಚಾನಕ್ಕಾಗಿ ಗೆದ್ದಿದ್ದಾರೆ.  ಆದರೆ, ಇದೀಗ ಜನ ಬುದ್ದಿವಂತರಿದ್ದಾರೆ. ಅಸಲಿಯತ್ತೇನು, ನಕಲಿಯತ್ತೇನು ಎಂಬ ಅರಿವಿದೆ. ಈ ಭಾರಿ ಬಿಜೆಪಿಗೆ ಮತ ನೀಡಲಿದ್ದಾರೆಂದು ನುಡಿದರು. ಈ ಭಾರಿ ನಮ್ಮ ಕ್ಷೇತ್ರಕ್ಕೆ ಚಾಣಾಕ್ಯ ಅಮಿತ್ ಶಾರವರು ಬಂದಿದ್ದು ನಮ್ಮೆಲ್ಲರಿಗೂ ಸಂತಸ ತಂದಿದೆ. ಇನ್ನಷ್ಟು ಹುರುಪಿನಿಂದ ಕರ‍್ಯನಿರ್ವಹಿಸಲು ಬೆನ್ನು ತಟ್ಟಿದ್ದಾರೆ. ಕಿಶನ್ ರೆಡ್ಡಿಯವರು ಕ್ಷೇತ್ರದ ಪ್ರಮುಖರನ್ನು ಭೇಟಿ ಮಾಡಿ ಈ ಬಾರಿ ನೀವೆಲ್ಲರೂ ಶ್ರೀಧರ್ ರೆಡ್ಡಿಯವರಿಗೆ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡಿದ್ದಾರೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಮುತ್ತಪ್ಪ, ಬಿಜೆಪಿ ಮಂಡಲಾಧ್ಯಕ್ಷ ರಾಜೇಂದ್ರ ರೆಡ್ಡಿ, ಕರ‍್ಯಕರ್ತರು, ಮುಖಂಡರುಗಳು ಭಾಗವಹಿಸಿದ್ದರು.

Related