ಉದ್ಯೋಗ ಮೇಳಕ್ಕೆ ಹರಿದುಬಂದ ಜನಸಾಗರ

ಉದ್ಯೋಗ ಮೇಳಕ್ಕೆ ಹರಿದುಬಂದ ಜನಸಾಗರ

ಬೆಂಗಳೂರು, (ಬಿಟಿಎಂ ಲೇಔಟ್): ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಮಂದಿ ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿರುವುದು ನಿಜಕ್ಕೂ ಆಶ್ಚರ್ಯ ತಂದಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ನುಡಿದರು.

ಇಂದು ಕೋರಮಂಗಲದಲ್ಲಿ ವೇಮನ ಇನ್ಸ್ಟ್ಯೂಟ್ ಆಫ್ ಟೆಕ್ನಾಲಜಿ ಆವರಣದಲ್ಲಿ ನೆಕ್ಸ್ಪ್ಲೇಸ್ ಇನ್‌ಫೋ ಪ್ರೈವೇಟ್ ಲಿ. ವತಿಯಿಂದ ಹಮ್ಮಿಕೊಂಡಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದ ರಾಮಲಿಂಗಾರೆಡ್ಡಿಯವರು ಆನ್‌ಲೈನ್ ಮೂಲಕ 16 ಸಾವಿರ ಉದ್ಯೋಗಾಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದು, ಇಂದು ಮೂವತ್ತು ಸಾವಿರಕ್ಕೂ ಹೆಚ್ಚು ಜನ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು. ಸುಮಾರು ನೂರಕ್ಕೂ ಅಧಿಕ ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿ ತಮ್ಮ ಸಂಸ್ಥೆಗೆ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರಿಗೆ ಯಾವುದೋ ಒಂದು ಸಂಸ್ಥೆಯಲ್ಲಿ ಅರ್ಹತೆ ಆಧಾರದ ಮೇರೆಗೆ ಉದ್ಯೋಗ ಕಲ್ಪಿಸುವ ಉದ್ದೇಶದೊಂದಿಗೆ ಈ ಮೇಳವನ್ನು ನಡೆಸಿದ್ದೇವೆ. ಒಬ್ಬರಿಗೆ ಉದ್ಯೋಗ ದೊರೆಯುವುದರಿಂದ ಇಡೀ ಕುಟುಂಬವೇ ಸಂತೃಪ್ತಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತದೆ. ನಿರುದ್ಯೋಗ ನಿರ್ಮೂಲನೆಯ ಸದುದ್ದೇಶದಿಂದ ಈ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಮುಂಬರುವ ದಿನಗಳಲ್ಲಿ ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗುವುದೆಂದರು.

ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ಭಾಗವಹಿಸಿ ಮಾತನಾಡುತ್ತಾ, ಕಾಂಗ್ರೆಸ್ ಪಕ್ಷದಿಂದಲೇ ಇಂತಹ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಲು ಸಾಧ್ಯವೆಂದರು.

ಕಾಂಗ್ರೆಸ್ ಮುಖಂಡ ರಾಮೋಜಿಗೌಡ ಮಾತನಾಡಿ, ಉದ್ಯೋಗ ಮೇಳದಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ಅಭ್ಯರ್ಥಿಗೆ ಹಾಗೂ ಅವರ ತಂದೆ ತಾಯಿಗಳಿಗೆ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಈ ಮೇಳದಲ್ಲಿ ಭಾಗವಹಿಸಿರುವ ಪ್ರತಿಯೊಬ್ಬ ಅಭ್ಯರ್ಥಿಗೆ ಉದ್ಯೋಗ ಕಲ್ಪಿಸುವ ಸದುದ್ದೇಶವನ್ನು ಹೊಂದಿದ್ದೇವೆಂದರು.

ಈ ಉದ್ಯೋಗ ಮೇಳದಲ್ಲಿ ಹೊರ ರಾಜ್ಯ ಆಂಧ್ರ, ತಮಿಳುನಾಡು, ಕೇರಳ, ಕರ್ನಾಟಕದ ಗಡಿ ಭಾಗಗಳಿಂದಲೂ ಅಭ್ಯರ್ಥಿಗಳು ಆಗಮಿಸಿದ್ದರು. ಈ ಕಾರ್ಯಕ್ರಮವನ್ನು ನೆಕ್ಸ್ಪ್ಲೇಸ್ ಇನ್‌ಫೋ ಪ್ರೈವೇಟ್ ಲಿ. ನಿರ್ದೇಶಕಿ ಆಶಿತಾ ಗೌಡರವರು ಆಯೋಜಿಸಿದ್ದರು.

ಈ ಕಾರ್ಯಕ್ರಮದಲ್ಲಿ ಜಯನಗರ ವಿ.ಕ್ಷೇತ್ರ ಶಾಸಕ ಸೌಮ್ಯಾ ರೆಡ್ಡಿ, ಮಾಜಿ ಮೇಯರ್ ಮಂಜುನಾಥ ರೆಡ್ಡಿ, ಮಾಜಿ ಪಾಲಿಕೆ ಸದಸ್ಯರುಗಳಾದ ನಾಗರಾಜು, ಬಿ. ಮೋಹನ್, ಮಂಜುನಾಥ, ಟಿ. ರಾಮಚಂದ್ರ, ಮುರುಗೇಶ್ ಮೊದಲಿಯಾರ್, ಮುನಿರಾಜ್, ಕಾಂಗ್ರೆಸ್ ಮುಖಂಡರುಗಳಾದ ವೆಂಕಟೇಶ್, ಆಶಿತಾ ಗೌಡ ರವರು ಭಾಗವಹಿಸಿದ್ದರು.

 

Related