6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಪಾರ್ಕ್

6 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೊಂಡಿರುವ ಪಾರ್ಕ್

ಬೊಮ್ಮನಹಳ್ಳಿ: ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿರುವ ಮಂಗಮ್ಮನಪಾಳ್ಯ ವಾರ್ಡ್ನ ಹೊಸಪಾಳ್ಯದಲ್ಲಿ ಸುಮಾರು 8 ಎಕರೆ ವಿಸ್ತೀರ್ಣದಲ್ಲಿ ಅಭಿವೃದ್ದಿಗೊಂಡಿರುವ ಉದ್ಯಾನವನವನ್ನು ವಿಧಾನಸಭಾ ಮುಖ್ಯ ಸಚೇತಕರು ಹಾಗೂ ಶಾಸಕ ಎಂ. ಸತೀಶ್ ರೆಡ್ಡಿಯವರು ಇಂದು ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಶಾಸಕ ಸತೀಶ್ ರೆಡ್ಡಿರವರು, ಹೊಸಪಾಳ್ಯವೆಂದರೆ ರೆವಿನ್ಯೂ ಬಡಾವಣೆ ಅರ್ಥಾತ್ ಹಳ್ಳಿ ಎಂದೇ ಬಿಂಬಿತವಾಗಿತ್ತು. ಸ್ಥಳೀಯ ನಿವಾಸಿಗಳ ಅಗತ್ಯತೆ ಹಾಗೂ ಬೇಡಿಕೆಗೆ ಅನುಗುಣವಾಗಿ ಉದ್ಯಾನವನವನ್ನು ಸುಮಾರು 6 ಕೋಟಿ ವೆಚ್ಚದಲ್ಲಿ ಅಭಿವೃದ್ದಿಗೊಳಿಸಿರುತ್ತೇವೆ. ಕೆಲ ಕಾಂಗ್ರೆಸ್ ನಾಯಕರು ಬೊಮ್ಮನಹಳ್ಳಿ ಕ್ಷೇತ್ರ ಅಭಿವೃದ್ದಿ ಆಗಿದೆಯಾ ಎಂದು ಪ್ರಶ್ನಿಸುತ್ತಾರೆ. ಅವರ ಕಣ್ಣಿಗೆ ಬಹುಶಃ ಪೊರೆ ಬಂದಿದೆ. ಹೊಸಪಾಳ್ಯ ಗ್ರಾಮದ ಅಕ್ಕಪಕ್ಕದಲ್ಲಿ ಕೆ.ಸಿ.ಡಿ.ಸಿ. ಗೊಬ್ಬರ ಕಾರ್ಖಾನೆ, ಒಂದೆಡೆ ಬರ್ನಿಂಗ್ ಸೆಂಟರ್ (ಶವಾಗಾರ), ಇನ್ನೊಂದೆಡೆ ಕೆರೆ ಇದೆ. ಇಲ್ಲಿನ ನಿವಾಸಿಗಳಿಗೆ ಉತ್ತಮವಾದ ವಾತಾವರಣದ ಅಗತ್ಯತೆ ಇತ್ತು.

ಇಂದು ಹೊಸಪಾಳ್ಯ ಗ್ರಾಮಕ್ಕೆ ಮಿನಿ ಲಾಲ್‌ಬಾಗ್ ಮಾದರಿಯಲ್ಲಿ ಉದ್ಯಾನವನವನ್ನು ಅಭಿವೃದ್ದಿಪಡಿಸಲಾಗಿದೆ. ಮಕ್ಕಳಿಗೆ ಆಟವಾಡಲು ಆಟಿಕೆಗಳು, ಹಿರಿಯರಿಗಾಗಿ ವಾಕಿಂಗ್, ಕುಳಿತುಕೊಳ್ಳಲು ಕಲ್ಲು ಹಾಸುಗಳು, ವಿವಿಧ ಜಾತಿಯ ಸಸ್ಯಗಳು, ಹೂವಿನ ಗಿಡಗಳು, ಪ್ರಕೃತಿಯ ಸೊಬಗನ್ನು ಸವಿಯಲು ಜನ ಒಮ್ಮೆಲೆಯಾದರೂ ಇಲ್ಲಿ ಬರುತ್ತಾರೆಂಬ ನಂಬಿಕೆ ನನ್ನದು. ಕೇವಲ ಹೊಸಪಾಳ್ಯ ಗ್ರಾಮಸ್ಥರಷ್ಟೇ ಅಲ್ಲದೇ, ಸುತ್ತಮುತ್ತಲಿನ ನಿವಾಸಿಗಳು ಈ ಉದ್ಯಾನವನದ ಸದುಪಯೋಗಪಡೆದುಕೊಳ್ಳಲಿದ್ದಾರೆಂದು ನುಡಿದರು.

ಈ ಸಂದರ್ಭದಲ್ಲಿ ಗುತ್ತಿಗೆದಾರ ಆನಂದರೆಡ್ಡಿ, ಮಂಗಮ್ಮನಪಾಳ್ಯದ ಬಿಜೆಪಿ ಮುಖಂಡರಾದ ಶ್ರೀನಿವಾಸ್ ಗೌಡ, ನಾಗೇಂದ್ರಗೌಡ, ಸೋಮಸಂದ್ರಪಾಳ್ಯ ಶ್ರೀನಿವಾಸ್ ರೆಡ್ಡಿ, ಹೊಂಗಸಂದ್ರ ನಾಗಭೂಷಣ ರೆಡ್ಡಿ ಮತ್ತಿತರರು ಭಾಗವಹಿಸಿದ್ದರು.

Related