ಸಿಎಂಗೆ ಪರಿಷತ್ ರಿಲೀಫ್

ಸಿಎಂಗೆ ಪರಿಷತ್ ರಿಲೀಫ್

ಬೆಂಗಳೂರು : ರಾಜ್ಯಸಭಾ ಟಿಕೆಟ್ ಹಂಚಿಕೆಯಲ್ಲಿ ಹೈಕಮಾಂಡ್ ಅಚ್ಚರಿ ಆಯ್ಕೆಯ ಆಘಾತಕ್ಕೆ ಸಿಲುಕಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪರಿಷತ್ ಚುನಾವಣೆಯಲ್ಲಿ ಆಘಾತ ಮರುಕಳಿಸದಂತೆ ನೋಡಿಕೊಂಡಿದ್ದಾರೆ.

ನಂಬಿದವರಿಗೆ ಟಿಕೆಟ್ ಕೊಡಿಸಿ ಮಾತು ಉಳಿಸಿಕೊಂಡಿದ್ದಾರೆ ಸಿಎಂ ಯಡಿಯೂರಪ್ಪ. ಹೌದು, ವಿಧಾನಸಭೆಯಿಂದ ವಿಧಾನ ಪರಿಷತ್‌ನ ಏಳು ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಸಂಖ್ಯಾಬಲದ ಆಧಾರದಲ್ಲಿ ಬಿಜೆಪಿಗೆ ನಾಲ್ಕು ಸ್ಥಾನ ಲಭಿಸುತ್ತಿದೆ.ಈ ನಾಲ್ಕು ಸ್ಥಾನಕ್ಕೆ ಹತ್ತಾರು ಆಕಾಂಕ್ಷಿಗಳ ನಡುವೆ ಅಳೆದು ತೂಗಿ ಅಭ್ಯರ್ಥಿಗಳ ಆಯ್ಕೆ ಮಾಡಲಾಗಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡರ ಸ್ಪರ್ಧೆಯಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಎಂಟಿಬಿ ನಾಗರಾಜ್ ಪರಾಜಿತಗೊಂಡು ಸಂಪುಟ ಸ್ಥಾನದಿಂದ ವಂಚಿತರಾಗಿದ್ದರು.

ಸಚಿವ ಸ್ಥಾನ ತ್ಯಾಗ ಮಾಡಿ ಬಿಜೆಪಿಗೆ ಬಂದು ಶಾಸಕ ಸ್ಥಾನ ಇಲ್ಲದಂತೆ ಮಾಡಿಕೊಂಡಿದ್ದರು. ಸರ್ಕಾರ ರಚನೆಗೆ ಸಾಥ್ ನೀಡಿದ್ದ ಎಂಟಿಬಿ ಸೋಲು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೇ ಆಘಾತ ತಂದಿತ್ತು. ಅಂದೇ ಪರಿಷತ್ ಸ್ಥಾನ ನೀಡಿ ಸಚಿವ ಸ್ಥಾನ ಕೊಡುವ ಅಭಯವನ್ನು ಎಂಟಿಬಿಗೆ ನೀಡಲಾಗಿತ್ತು. ಅದರಂತೆ ಈಗ ಹೈಕಮಾಂಡ್ ಒಪ್ಪಿಸಿ ಎಂಟಿಬಿಗೆ ಟಿಕೆಟ್ ಕೊಡಿಸುವಲ್ಲಿ ಸಿಎಂ ಸಫಲರಾಗಿದ್ದಾರೆ.

ರಾಜೀನಾಮೆ ಕೊಟ್ಟು ಅನರ್ಹ ಶಾಸಕರ ಪಟ್ಟ ಹೊತ್ತವರಲ್ಲಿ ಆತ್.ಶಂಕರ್ ಕೂಡ ಒಬ್ಬರು, ಸಚಿವ ಸ್ಥಾನ ತ್ಯಜಿಸಿ ಬಂದಿದ್ದರು. ಆದರೆ, ರಾಣೆಬೆನ್ನೂರು ಕ್ಷೇತ್ರದ ಮತದಾರ ಉಪಚುನಾವಣೆಯಲ್ಲಿ ಶಂಕರ್ ಕೈ ಹಿಡಿಯಲ್ಲ ಎನ್ನುವ ಕಾರಣಕ್ಕೆ ವಿಧಾನ ಪರಿಷತ್ ಟಿಕೆಟ್ ಭರವಸೆ ನೀಡಿ ಅರುಣ್ ಕುಮಾರ್‌ಗೆ ಸಿಎಂ ಟಿಕೆಟ್ ಕೊಡಿಸಿದ್ದರು. ಅಂದು ಕಣ್ಣೀರು ಹಾಕುತ್ತ ಸಿಎಂ ನಿವಾಸದಿಂದ ಹೊರಬಂದಿದ್ದ ಶಂಕರ್‌ಗೆ ಪರಿಷತ್ ಟಿಕೆಟ್ ಕೊಡಿಸುವ ಮೂಲಕ ಬಿಎಸ್‌ವೈ ಮಾತು ಉಳಿಸಿಕೊಂಡಿದ್ದಾರೆ. ಚಿಂಚೋಳಿ ಕ್ಷೇತ್ರದ ಉಪ ಚುನಾವಣಾ ಆಕಾಂಕ್ಷಿಯಾಗಿದ್ದ ಸುನಿಲ್ ವಲ್ಯಾಪುರೆ ಮನವೊಲಿಸಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾಕಷ್ಟು ಕಷ್ಟಪಟ್ಟಿದ್ದರು.

ಒಟ್ಟಿನಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಅದಂತೆ ಆದರೆ ಏನುಗತಿ ಎನ್ನುವ ಆತಂಕದಲ್ಲಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಹೈಕಮಾಂಡ್ ಖುಷಿಯಾಗುವ ರೀತಿ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಿದೆ. ವಿಶ್ವನಾಥ್ ವಿಷಯ ಹೊರತುಪಡಿಸಿದರೆ ಸದ್ಯಕ್ಕೆ ಸಿಎಂ ನಿರಾಳ ಎನ್ನಬಹುದಾಗಿದೆ.

Related